ನವದೆಹಲಿ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ತನ್ನ ಗುಡಿಸಲನ್ನು ಬುಲ್ಡೋಜರ್ ಧ್ವಂಸ ಮಾಡುತ್ತಿದ್ದ ವೇಳೆ, 8 ವರ್ಷದ ಬಾಲಕಿ ಪಠ್ಯಪುಸ್ತಕಗಳನ್ನು ಹಿಡಿದು ಓಡುತ್ತಿದ್ದ ದೃಶ್ಯವಿರುವ ವಿಡಿಯೊ ಪ್ರತಿಯೊಬ್ಬರಿಗೂ ಆಘಾತ ತಂದಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಉಜ್ಜಲ್ ಭುಯಾನ್ ಅವರು ಇದ್ದ ನ್ಯಾಯಪೀಠವು, ಪ್ರಯಾಗರಾಜ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತ ಅರ್ಜಿ ವಿಚಾರಣೆ ವೇಳೆ ಈ ವಿಷಯ ಪ್ರಸ್ತಾಪಿಸಿದೆ.
ಅಂಬೇಡ್ಕರ್ ನಗರದ ಜಲಾಲಪುರದಲ್ಲಿ ಈ ಘಟನೆ ನಡೆದಿತ್ತು. ತೆರವು ಕಾರ್ಯಾಚರಣೆಯನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
'ಜಲಾಲಪುರ ತಹಶೀಲ್ದಾರ್ ಆದೇಶದ ಮೇರೆಗೆ ಗ್ರಾಮದ ಜಮೀನಿನಲ್ಲಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ವಸತಿಯೇತರ ನಿರ್ಮಾಣಗಳ ತೆರವಿಗೂ ಮುನ್ನ ಹಲವು ನೋಟಿಸ್‌ಗಳನ್ನು ನೀಡಲಾಗಿತ್ತು' ಎಂದೂ ಪೊಲೀಸರು ಪೀಠಕ್ಕೆ ತಿಳಿಸಿದ್ದಾರೆ.
ಜಲಾಲಪುರ ತಹಶೀಲ್ದಾರ್, 2024ರ ಅಕ್ಟೋಬರ್ 15ರಂದು ಈ ಕುರಿತ ಆದೇಶ ಹೊರಡಿಸಿತ್ತು.




