HEALTH TIPS

ಉಗ್ರರ ದಾಳಿ | ಬಿಜೆಪಿಯಿಂದ ಧ್ರುವೀಕರಣ ರಾಜಕೀಯ-ಕಾಂಗ್ರೆಸ್‌

ನವದೆಹಲಿ: 'ಹೇಡಿತನದಿಂದ ಕೂಡಿರುವ ಪಹಲ್ಗಾಮ್‌ ದಾಳಿಯ ರೂವಾರಿಯೇ ಪಾಕಿಸ್ತಾನ. ಇದು ನಮ್ಮ ಗಣತಂತ್ರ ಮೌಲ್ಯಗಳ ಮೇಲಿನ ನೇರ ದಾಳಿ' ಎಂದು ಕಾಂಗ್ರೆಸ್‌ ದೂರಿದೆ. 'ದೇಶದಲ್ಲಿ ಒಗ್ಗಟ್ಟು ಅಗತ್ಯವಿರುವ ಇಂತಹ ಸನ್ನಿವೇಶದಲ್ಲಿ ಬಿಜೆಪಿ ಈ ದುರಂತವನ್ನು ಧ್ರುವೀಕರಣ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ' ಎಂದು ಕಿಡಿಕಾರಿದೆ.

ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಭಯೋತ್ಪಾದಕರ ದಾಳಿಯನ್ನು ಖಂಡಿಸಿ ನಿರ್ಣಯ ತೆಗೆದುಕೊಂಡಿದೆ. ಗುರುವಾರ ಇಲ್ಲಿ ನಡೆದ ವಿಶೇಷ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕರು ಭಾಗಿಯಾಗಿದ್ದರು.

'ಉಗ್ರರ ದಾಳಿ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳಿಂದ ಮತ್ತು ನಾಗರಿಕರ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದಾಗ್ಯೂ, ಒಗ್ಗಟ್ಟು ಅತ್ಯಂತ ಅಗತ್ಯವಿರುವ ಸಮಯದಲ್ಲಿ ಬಿಜೆಪಿ ಈ ಗಂಭೀರ ದುರಂತವನ್ನು ಅಧಿಕೃತ ಮತ್ತು ನಕಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತಷ್ಟು ಭಿನ್ನಾಭಿಪ್ರಾಯ ಹಾಗೂ ಅಪನಂಬಿಕೆ ಮೂಡಿಸಲು, ಧ್ರುವೀಕರಣ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಆಘಾತಕಾರಿ' ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

'ದೇಶದಾದ್ಯಂತ ಜನರ ಭಾವನೆಗಳನ್ನು ಕೆರಳಿಸಲು ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಉಗ್ರರು ಯೋಜಿತ ಕೃತ್ಯ ನಡೆಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು. ಗಡಿಯಾಚೆಗಿನ ಭಯೋತ್ಪಾದನೆಯನ್ನು ದೃಢನಿಶ್ಚಯ ಮತ್ತು ಏಕತೆಯಿಂದ ಎದುರಿಸಬೇಕು' ಎಂದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ‌, 'ಈ ದಾಳಿಗೆ ಗುಪ್ತಚರ ವೈಫಲ್ಯ ‍ಪ್ರಮುಖ ಕಾರಣ' ಎಂದು ಆರೋಪಿಸಿದರು.

ಉಗ್ರರ ದಾಳಿಯಿಂದ ಮೃತಪಟ್ಟ 26 ಪ್ರವಾಸಿಗರಿಗೆ ಗೌರವ ಸಲ್ಲಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಪ್ರತಿಭಟಿಸಲು ಏಪ್ರಿಲ್ 25 ರಂದು ಪಕ್ಷವು ದೇಶದಾದ್ಯಂತ ಮೊಂಬತ್ತಿ ಹಿಡಿದು ಮೆರವಣಿಗೆಗಳನ್ನು ನಡೆಸಲಿದೆ ಎಂದು ವೇಣುಗೋಪಾಲ್ ಘೋಷಿಸಿದರು.

'ಪಹಲ್ಗಾಮ್‌ನಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಇದೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ನೇರವಾಗಿ ಒಳಪಡುವ ಈ ಪ್ರದೇಶದಲ್ಲಿ ಇಂತಹ ದಾಳಿಗೆ ಗುಪ್ತಚರ ವೈಫಲ್ಯ ಮತ್ತು ಭದ್ರತಾ ಲೋಪವೇ ಪ್ರಮುಖ ಕಾರಣ. ಈ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಸಬೇಕು' ಎಂದು ಅವರು ಒತ್ತಾಯಿಸಿದರು.

'ಅಮರನಾಥ ಯಾತ್ರೆ ಶೀಘ್ರದಲ್ಲೇ ಆರಂಭವಾಗಲಿದ್ದು, ಲಕ್ಷಾಂತರ ಯಾತ್ರಿಕರು ಭಾಗವಹಿಸಲಿದ್ದಾರೆ. ಅವರ ಸುರಕ್ಷತೆಯನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಬೇಕು' ಎಂದು ಸಭೆಯು ನಿರ್ಣಯ ಅಂಗೀಕರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries