ನವದೆಹಲಿ: 'ಸಂಸತ್ ಮತ್ತು ಕಾರ್ಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂಬ ಆರೋಪ ನಮ್ಮ ಮೇಲಿದೆ' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸೋಮವಾರ ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತ ವಿಚಾರಣೆ ಸಂದರ್ಭದಲ್ಲಿ ಬಿ.ಆರ್.ಗವಾಯಿ ಅವರು, ಇತ್ತೀಚೆಗೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ನ್ಯಾಯಾಂಗದ ಬಗ್ಗೆ ಅಗೌರವದ ಹೇಳಿಕೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ನಂತರ ಸಾಮಾಜಿಕ ಮಾಧ್ಯಮಗಳು ಮತ್ತು ಒಟಿಟಿಯಲ್ಲಿ ಲೈಂಗಿಕತೆ ಮತ್ತು ಅಶ್ಲೀಲ ಅಂಶಗಳನ್ನು ಒಳಗೊಂಡ ವಿಡಿಯೊ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ ಅರ್ಜಿ ವಿಚಾರಣೆ ವೇಳೆಯೂ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು, 'ಕಾರ್ಯಾಂಗ ಮತ್ತು ಸಂಸತ್ತಿನ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂದು ನಮ್ಮನ್ನು ಟೀಕಿಸಲಾಗುತ್ತಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
'ಸಾಮಾಜಿಕ ಮಾಧ್ಯಮಗಳಲ್ಲಿನ ಅಂಶಗಳನ್ನು ಯಾರು ನಿಯಂತ್ರಿಸಲು ಸಾಧ್ಯ? ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಕಾನೂನು ರೂಪಿಸಬೇಕು' ಎಂದು ನ್ಯಾಯಪೀಠ ನುಡಿಯಿತು.
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕೋರಿ 2021ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಂಗಳವಾರ ನಿಗದಿಯಾಗಿದೆ. ಇದೇ ವೇಳೆ 2022ರಿಂದ 2025ರ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ನಡೆದ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹಿಂಸಾಚಾರ ಘಟನೆಗಳು ಹಾಗೂ ವಿಶೇಷವಾಗಿ ಮುರ್ಶಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೋರಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲ ವಿಷ್ಣು ಶಂಕರ್ ಜೈನ್ ಕೋರಿದ್ದರು.




