ನವದೆಹಲಿ: ತನ್ನ ಹುಸಿ ರಾಷ್ಟ್ರೀಯತೆಯ ಮೂಲಕ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಆಡಳಿತ ಪಕ್ಷವು ಮಾಡುತ್ತಿರುವ ಘೋರ ಅನ್ಯಾಯಗಳನ್ನು ನ್ಯಾಯಮಾರ್ಗದ ಮೂಲಕ ಎದುರಿಸಲು ಸಜ್ಜಾಗಬೇಕು ಎಂದು ಕಾಂಗ್ರೆಸ್ ಕರೆ ನೀಡಿದೆ. ಈ ಮೂಲಕ, ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರಮಣಕಾರಿ ಸೈದ್ಧಾಂತಿಕ ಹೋರಾಟಕ್ಕೆ ಅಣಿಯಾಗಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಪಕ್ಷದ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಿಡಬ್ಲ್ಯುಸಿ ಸಭೆಯಲ್ಲಿ ಗುಜರಾತ್ ಕುರಿತು ಒಂದು ನಿರ್ಣಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಇನ್ನೊಂದು ನಿರ್ಣಯದ ಕುರಿತು ಚರ್ಚಿಸಲಾಗಿದೆ. ಬುಧವಾರ ನಡೆಯಲಿರುವ ಎಐಸಿಸಿ ಅಧಿವೇಶನದಲ್ಲಿ ಈ ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.
ನಕಲಿ ಮುಖಾಮುಖಿ ಮತ್ತು ದುರುದ್ದೇಶಪೂರಿತವಾಗಿ ಹೇಳಿಕೊಳ್ಳುವ ವಿಭಜನೆಯ ಸಿದ್ಧಾಂತವು ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ನಡುವಿನ ಸಂಘರ್ಷದ ಬಗ್ಗೆ ಉದ್ದೇಶಪೂರ್ವಕ ಸುಳ್ಳುಗಳ ಜಾಲ ಹರಡಲು ಕಾರಣವಾಯಿತು ಎಂದು ಪಕ್ಷವು ನಿರ್ಣಯದಲ್ಲಿ ತಿಳಿಸಿದೆ. 'ವಾಸ್ತವದಲ್ಲಿ ಈ ಸುಳ್ಳು ನಮ್ಮ ಸ್ವಾತಂತ್ರ್ಯ ಹೋರಾಟದ ನೀತಿ ಮತ್ತು ಗಾಂಧಿ-ನೆಹರೂ-ಪಟೇಲ್ ಅವರ ಬೇರ್ಪಡಿಸಲಾಗದ ನಾಯಕತ್ವದ ಮೇಲಿನ ದಾಳಿಯಾಗಿದೆ. ದ್ವೇಷ ಮತ್ತು ವಿಭಜನೆಯ ಶಕ್ತಿಗಳಿಂದು ಈ ಸೌಹಾರ್ದದ ಮತ್ತು ಸ್ನೇಹಪರತೆಯ ಮನೋಭಾವವನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ' ಎಂದು ಪಕ್ಷ ಹೇಳಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, 'ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ' ಎಂದು ಹೇಳಿದರು.
ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ ಪಕ್ಷವು ಹಿಂಸಾಚಾರ ಹಾಗೂ ಕೋಮುವಾದವು ದೇಶವನ್ನು ದ್ವೇಷದ ಪ್ರಪಾತಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದೆ. ಧಾರ್ಮಿಕ ಧ್ರುವೀಕರಣದ ಉನ್ಮಾದದ ವಿರುದ್ಧ ಹೋರಾಡುವ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢನಿಶ್ಚಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷ ಘೋಷಿಸಿದೆ.




