ಜಮ್ಮು: ಜಮ್ಮು ಮತ್ತು ಕಾಶ್ಮಿರದ ಅಖ್ನೂರ್ ವಲಯದಲ್ಲಿ ಭಯೋತ್ಪಾದಕ ಒಳನುಸುಳುವಿಕೆ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಶ್ರೇಣಿಯ ಅಧಿಕಾರಿ (ಜೆಸಿಒ) ಹುತಾತ್ಮರಾಗಿದ್ದಾರೆ.
ಶುಕ್ರವಾರ ತಡರಾತ್ರಿ ಅಖ್ನೂರ್ ಕೇರಿ ಭಟ್ಟಲ್ ಪ್ರದೇಶದ ಮುಂಭಾಗದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಶಸ್ತಾಸ್ತ್ರ ಹೊತ್ತ ಹಲವು ಉಗ್ರರು ಭಟ್ಟಲ್ ಪ್ರದೇಶದ ಅರಣ್ಯದಿಂದ ಒಳನುಸಳಲು ಯತ್ನಿಸುತ್ತಿದ್ದರು. ಕೂಡಲೇ ಕಾರ್ಯಪೃವೃತ್ತರಾದ ಸೇನಾ ಪಡೆಗಳು, ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಉಗ್ರರ ಕಡೆಗೆ ಭಾರಿ ಹಾನಿಯಾಗಿದ್ದು ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ಪ್ರಾಥಮಿಕವಾಗಿ ತಿಳಿಸಿದ್ದಾರೆ.
ಹುತಾತ್ಮರಾದ ಜೆಸಿಒ ಅಧಿಕಾರಿಯ ಹೆಸರು ಇನ್ನೂ ತಿಳಿದು ಬಂದಿಲ್ಲ. ಕಳೆದ ಫೆಬ್ರುವರಿ 11 ರಂದು ಇದೇ ಪ್ರದೇಶದಲ್ಲಿ, ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಿಡಿಸಿದ್ದರಿಂದ ಸೇನೆಯ ಕ್ಯಾಪ್ಟನ್ ಸೇರಿದಂತೆ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದರು. ಇನ್ನೊಬ್ಬರು ಗಾಯಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಗಡಿ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಭಾರತ ಮತ್ತು ಪಾಕಿಸ್ತಾನ ಬ್ರಿಗೇಡ್ ಕಮಾಂಡರ್‌ಗಳ ಸಭೆಯ ಎರಡು ದಿನಗಳ ನಂತರ ಈ ಕಹಿ ಘಟನೆ ನಡೆದಿದೆ.




