ತಿರುವನಂತಪುರಂ: ಅನ್ಯರಾಜ್ಯ ಕಾರ್ಮಿಕರ ಮಕ್ಕಳಿಗೆ ಶಾಲಾ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಅಭಿಯಾನವು ಮೇ ತಿಂಗಳಲ್ಲಿ ಆರಂಭಗೊಳ್ಳಲಿದೆ.
ಮೇ 7 ರಂದು ಎರ್ನಾಕುಳಂನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಗ್ರ ಶಿಕ್ಷಣ ಕಾರ್ಯಕ್ರಮವನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅನ್ಯರಾಜ್ಯ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಕ್ಕಾಗಿ ಎಸ್.ಸಿ.ಇ.ಆರ್.ಟಿ ಸಮಗ್ರ ಶೈಕ್ಷಣಿಕ ಕಾರ್ಯಕ್ರಮ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ಶಾಲಾ ಪ್ರವೇಶ ರಿಜಿಸ್ಟರ್‍ಗಳನ್ನು ನಿರ್ವಹಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ರಿಜಿಸ್ಟರ್ ಅನ್ನು ನವೀಕರಿಸಬೇಕು ಎಂದು ಸಭೆಯು ನಿರ್ದೇಶಿಸಿದೆ.
ದುಡಿಯುವ ಕುಟುಂಬಗಳು ಸ್ಥಳಾಂತರಗೊಂಡಾಗ, ಅವರ ಮಕ್ಕಳಿಗೆ ಹೊಸ ಸ್ಥಳದಲ್ಲಿ ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಮಕ್ಕಳೊಂದಿಗೆ ಸಾಂಸ್ಕøತಿಕ ವಿನಿಮಯಕ್ಕೆ ಅವಕಾಶಗಳನ್ನು ಒದಗಿಸಬೇಕು.
ಆಧಾರ್ ಆಧಾರಿತ ನೋಂದಣಿಗಾಗಿ ವಿಶೇಷ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವಾಗ, ಮಕ್ಕಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಸಹ ಸೇರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಸಚಿವ ವಿ ಶಿವನ್‍ಕುಟ್ಟಿ, ಕಾರ್ಮಿಕ ಕಾರ್ಯದರ್ಶಿ ಕೆ ವಾಸುಕಿ, ಸಾಮಾನ್ಯ ಶಿಕ್ಷಣ ನಿರ್ದೇಶಕ ಎ ಶಾನವಾಸ್, ಕಾರ್ಮಿಕ ಆಯುಕ್ತೆ ಸಫ್ನಾ ನಸರುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದರು.






