ಚೆನ್ನೈ: ಉಪನಗರ ರೈಲ್ವೆ ಸಂಪರ್ಕ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವಲಯವು ಚೆನ್ನೈ ಬೀಚ್-ಚೆಂಗಲ್‌ಪಟ್ಟು ಮಾರ್ಗದಲ್ಲಿ ಹವಾನಿಯಂತ್ರಿತ ಎಮು (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಸೇವೆಗೆ ಶನಿವಾರ ಚಾಲನೆ ನೀಡಿದೆ.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಚೊಚ್ಚಲ ಸಂಚಾರದಲ್ಲಿ ನೂರಾರು ಮಂದಿ ಪ್ರಯಾಣಿಕರು ಪ್ರಯಾಣಿಸಿ ಸಂತಸ ವ್ಯಕ್ತಪಡಿಸಿದರು.
ರೈಲು 12 ಹವಾನಿಯಂತ್ರಿತ ಬೋಗಿಗಳನ್ನು ಒಳಗೊಂಡಿರಲಿದ್ದು, ಚೆನ್ನೈನ ಐಸಿಎಫ್ ಕೋಚ್ ಕಾರ್ಖಾನೆಯಲ್ಲಿ ತಯಾರಾಗಿದೆ. ಹಲವು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, 'ಮೆಟ್ರೊ'ದಲ್ಲಿ ಪ್ರಯಾಣಿಸಿದ ಅನುಭವ ದೊರಕಲಿದೆ' ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಹವಾನಿಯಂತ್ರಿತ ಕೋಚ್, ಸ್ವಯಂಚಾಲಿತ ಬಾಗಿಲುಗಳು, ಸ್ಟೇನ್‌ಲೆಸ್ ಸ್ಟೀಲ್ ಸೀಟು ವ್ಯವಸ್ಥೆ, ಜಿಪಿಎಸ್ ಆಧಾರಿತ ಎಲ್‌ಇಡಿ ಪರದೆ, ಸಿ.ಸಿ.ಟಿ.ವಿ ಕಣ್ಗಾವಲು ವ್ಯವಸ್ಥೆ, ತುರ್ತು ಪರಿಸ್ಥಿತಿ ವೇಳೆ ಪ್ರಯಾಣಿಕರಿಗೆ ಟಾಕ್-ಬ್ಯಾಕ್ ವ್ಯವಸ್ಥೆ ಹೊಂದಿದೆ.
ಕಚೇರಿಗೆ ತೆರಳುವವರು ಹಾಗೂ ಮಹಿಳಾ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮುಂಬೈನಲ್ಲಿ ಮೊದಲಿಗೆ ಹವಾನಿಯಂತ್ರಿತ 'ಎಮು' ರೈಲು ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು.
ಭಾನುವಾರ ಹೊರತುಪಡಿಸಿ, ಚೆನ್ನೈ ಬೀಚ್- ಚೆಂಗಲ್‌ಪಟ್ಟು ನಡುವೆ 4 ಟ್ರಿಪ್, ಚೆನ್ನೈ ಬೀಚ್- ತಂಬರಮ್ ನಡುವೆ ಎರಡು ಟ್ರಿಪ್‌ಗಳು ಇರಲಿವೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
10 ಕಿ.ಮೀವರೆಗಿನ ಕನಿಷ್ಠ ಪ್ರಯಾಣ ದರವು ₹35 ಇರಲಿದ್ದು, 60 ಕಿ.ಮೀ. ಪ್ರಯಾಣಕ್ಕೆ ₹105 ಇರಲಿದೆ. ಮಾಸಿಕ ಸೀಸನ್ ಟಿಕೆಟ್ ದರ ಪ್ರಯಾಣದ ದೂರಕ್ಕೆ ಅನುಗುಣವಾಗಿ ₹620ರಿಂದ ₹2,115ರವರೆಗೆ ಇರಲಿದೆ.




