ಮಧೂರು : ಸೀಮೆ ದೇಗುಲ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ ಭಕ್ತಿ ಸಂಭ್ರಮದಿಂದ ಬುಧವಾರ ನೆರವೇರಿತು. ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿದ್ದಂತೆ, ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆಗೆ ಚಾಲನೆ ನೀಡಲಾಯಿತು.
ಬೆಳಗ್ಗೆ 7ರಿಂದ ಬ್ರಹ್ಮಕಲಶಾಭಿಷೇಕ ಆರಂಭಗೊಂಡಿತು. ಬೆಳಗ್ಗೆ 9.55ರ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ಮದನಂತೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅವಸ್ರುತ ಬಲಿ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾರೋಹಣ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳ ಮಂಗಳಘೋಷದ ನಡುವೆ 33ವರ್ಷಗಳ ನಂತರ ಮಧೂರು ದೇಗುಲದಲ್ಲಿ ಬ್ರಹ್ಮಕಲಶ ನಡೆದಿದೆ.
ಮೂಡಪ್ಪಸೇವಾ ಧ್ವಜಾರೋಹಣ:
ಏ. 5ರಂದು ನಡೆಯಲಿರುವ ಶ್ರೀಮಹಾಗಣಪತಿ ದೇವರ ಮೂಡಪ್ಪ ಸೇವೆಯ ಅಂಗವಾಗಿ ಮಹಾಮೂಡಪ್ಪಸೇವೆಯ ಪ್ರಾರ್ಥನೆಯೊಂದಿಗೆ ಧ್ವಜಾರೋಹಣ ನೆರವೇರಿತು. ನಂತರ ಶ್ರೀದೇವರ ಬಲಿ ಉತ್ಸವ ನೆರವೇರಿತು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಯ ವಿಷ್ಣು ಆಸ್ರ ಅವರ ನೆತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ದೇವರ ಉತ್ಸವ ಬಲಿ, ಶ್ರೀಮಹಾಗಣಪತಿ ಮಂತ್ರಾನುಷ್ಠಾನ ನಡೆಯಿತು.
ಏ. 5ರಂದು ಶ್ರೀಮಹಾಗಣಪತಿಗೆ ಮೂಡಪ್ಪ ಸೇವೆ ನಡೆಯಲಿರುವುದು. ಅಂದು ಬೆಳಗ್ಗೆ 5ಕ್ಕೆ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ, ಮಧ್ಯಾಹ್ನ ಅಪ್ಪ ತಯಾರಿ ಆರಂಭ, ಸಂಜೆ 5ಕ್ಕೆ ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ರಾತ್ರಿ 8ಕ್ಕೆ ಶ್ರೀದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, ರಾತ್ರಿ 10ಕ್ಕೆ ಶ್ರೀ ಭೂತಬಲಿ ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಾ ಕಲ್ಪನೆ, ಕವಾಟಬಂಧನ ನಡೆಯುವುದು. 6ರಂದು ಸೂರ್ಯೋದಯಕ್ಕೆ ಕವಾಟೋದ್ಘಾಟನೆಯೊಂದಿಗೆ ಅಪೂಪ ಪರ್ವತದ ಂಧ್ಯದಿಂದ ಮೂಡಿಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನ ನಡೆಯುವುದು.








