ನವದೆಹಲಿ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ಮುಂದಿನ ತಿಂಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪಯಣಿಸಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕಾರ್ಯಗಳ ಪರಿಶೀಲಿಸಿದ ನಂತರ ಅವರು ಈ ಮಾಹಿತಿ ನೀಡಿದ್ದಾರೆ.
'ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಈ ಗಗನಯಾನಕ್ಕೆ ಮಹತ್ವ ಇದೆ. ಇದು, ಅಂತರಿಕ್ಷ ಅನ್ವೇಷಣೆಗೆ ಸಂಬಂಧಿಸಿ ಭಾರತ ಹೊಸ ಶಕೆಗೆ ಪದಾರ್ಪಣೆ ಮಾಡುವುದನ್ನು ತೋರಿಸುತ್ತದೆ' ಎಂದು ಸಿಂಗ್ ಹೇಳಿದ್ದಾರೆ.
ಇದೇ ವೇಳೆ, ಸಂಸ್ಥೆಯ ಉದ್ದೇಶಿತ ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು ಸಭೆಗೆ ಮಾಹಿತಿ ನೀಡಿದರು.
'ಆಯಕ್ಸಿಯಂ-4' ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಅವರು ಅಂತರಿಕ್ಷ ಯಾನ ಕೈಗೊಳ್ಳುತ್ತಿದ್ದಾರೆ. ರಷ್ಯಾದ ಸೋಯುಜ್ ಗಗನನೌಕೆಯಲ್ಲಿ ರಾಕೇಶ್ ಶರ್ಮಾ ಅವರು ಗಗನಯಾನ ಕೈಗೊಂಡಿದ್ದರು. ಇದಾದ ನಾಲ್ಕು ದಶಕಗಳ ಬಳಿಕ ಭಾರತದ ಗಗನಯಾನಿ ಇಂತಹ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿದ್ದಾರೆ.




