ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಹಾಗೂ ವೈಎಸ್‌ಆರ್‌ಸಿಪಿ ಮುಖಂಡ ಬಿ. ಕರುಣಾಕರ ರೆಡ್ಡಿ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಆಡಳಿತದ ವೈಫಲ್ಯದಿಂದ ಎಸ್.ವಿ. ಗೋಶಾಲೆಯಲ್ಲಿ 100 ಹಸುಗಳು ಸತ್ತಿವೆ ಎಂದು ಕರುಣಾಕರ ರೆಡ್ಡಿ ಸುಳ್ಳು ಹೇಳಿಕೆ ನೀಡಿದ್ದಾರೆ' ಎಂದು ಟಿಟಿಡಿ ಮಂಡಳಿ ಸದಸ್ಯ ಭಾನುಪ್ರಕಾಶ್ ರೆಡ್ಡಿ ಅವರು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ರೆಡ್ಡಿಗೆ ದೂರು ನೀಡಿದ್ದಾರೆ.
'ಟಿಟಿಡಿಯ ಮಾಜಿ ಅಧ್ಯಕ್ಷರ ಸುಳ್ಳು ಹೇಳಿಕೆಗಳು ಭಕ್ತರ ಮನಸ್ಸಿಗೆ ನೋವುಂಟು ಮಾಡಿವೆ' ಎಂದು ಭಾನುಪ್ರಕಾಶ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನನ್ವಯ ವಿವಿಧ ಕಾಯ್ದೆಗಳಡಿ ಕರುಣಾಕರ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ಟಿಟಿಡಿಯ ಗೋಶಾಲೆಗೆ ಪ್ರವೇಶ ನಿರಾಕರಿಸಿದ ನಂತರ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಗುರುವಾರ ಇಲ್ಲಿ ಪ್ರತಿಭಟಿಸಿದ್ದರು. ಈ ಸಂದರ್ಭ ನಿರ್ಲಕ್ಷ್ಯದಿಂದಾಗಿಯೇ ಗೋವುಗಳು ಸತ್ತಿವೆ ಎಂದು ಆರೋಪಿಸಿದ್ದರು. ತಿರುಪತಿ ಸಂಸದ ಎಂ.ಗುರುಮೂರ್ತಿ ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.




