ಕೋಲ್ಕತ್ತ: ತನ್ನ ಆದೇಶಗಳನ್ನು ಪಾಲಿಸದ ಯಾವುದೇ ವ್ಯಕ್ತಿಯ ಬಂಧನಕ್ಕೆ ವಾರಂಟ್ ಹೊರಡಿಸುವ ಅಧಿಕಾರವನ್ನು ಗ್ರಾಹಕ ವ್ಯಾಜ್ಯಗಳನ್ನು ಪರಿಹರಿಸುವ ವೇದಿಕೆಯು ಹೊಂದಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ಅರ್ಜಿಯ ವಿಚಾರಣೆ ನಡೆಸಿ, ಗ್ರಾಹಕ ವೇದಿಕೆ ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ, ಈ ರೀತಿಯ ನೋಟಿಸ್ ಜಾರಿಗೊಳಿಸುವುದು ಗ್ರಾಹಕ ಹಿತರಕ್ಷಣೆ ಕಾಯ್ದೆಯ ನಿಬಂಧನೆಗಳ ವ್ಯಾಪ್ತಿಗೆ ಬರುವುದಿಲ್ಲ ಎಂದೂ ಹೇಳಿದ್ದಾರೆ.
2013ರಲ್ಲಿ ವ್ಯಕ್ತಿಯೊಬ್ಬರು ಫೈನಾನ್ಸ್ ಕಂಪನಿಯೊಂದರಿಂದ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಬಳಿಕ ₹25,716 ಸಾಲ ಮರುಪಾವತಿಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಕೊಟ್ಟಿದ್ದ ಸಂಸ್ಥೆಯು ಟ್ರಾಕ್ಟರ್, ಆರ್‌ಸಿಯನ್ನು ವಶಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಲ ಪಡೆದ ವ್ಯಕ್ತಿಯು ಗ್ರಾಹಕ ವೇದಿಕೆ ಮೊರೆ ಹೋಗಿದ್ದರು. ಆದರೆ, ಗ್ರಾಹಕ ವೇದಿಕೆಯು ಸಾಲ ಪಾವತಿಸಿದ ಬಳಿಕವೇ ಆರ್‌ಸಿಯನ್ನು ಅವರಿಗೆ ಮರಳಿಸುವಂತೆ ಸಂಸ್ಥೆಗೆ ಆದೇಶ ನೀಡಿತ್ತು.
ವೇದಿಕೆ ಆದೇಶಿಸಿದ ಬಳಿಕವೂ ವ್ಯಕ್ತಿ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಲ ಕೊಟ್ಟ ಸಂಸ್ಥೆ ಗ್ರಾಹಕ ವೇದಿಕೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ವೇದಿಕೆಯು ವ್ಯಕ್ತಿಯ ಬಂಧನಕ್ಕೆ ನೋಟಿಸ್ ಜಾರಿಗೊಳಿಸಿತ್ತು ಎನ್ನಲಾಗಿದೆ.



