ಕುಂಬಳೆ: ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ದ್ವೇಷದಿಂದ ಮಹಿಳೆ ಮನೆಗೆ ಅಕ್ರಮವಾಗಿ ನುಗ್ಗಿ ಗೃಹಿಣಿಗೆ ಹಲ್ಲೆಗೈದಿರುವುದಲ್ಲದೆ, ಹೊರಗೆ ನಿಲ್ಲಿಸಿದ್ದ ಕಾರಿಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಆರಿಕ್ಕಾಡಿ ಕುನ್ನು ನಿವಾಸಿ ಮಹಿಳೆಯ ಪತಿ ಸಂಬಂಧಿ ನವಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರಿಕ್ಕಾಡಿ ಹಳೇ ರಸ್ತೆ ನಿವಾಸಿ, 40ರ ಹರೆಯದ ಗೃಹಿಣಿ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ಏ. 3ರಂದು ರಾತ್ರಿ ಮನೆಗೆ ಅತಿಕ್ರಮಿಸಿ ನುಗ್ಗಿದ ಆರೋಪಿ, ತನ್ನ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ತೆರಳಿದ್ದಾನೆ. ಎರಡು ದಿವಸಗಳ ನಂತರ ಮತ್ತೆ ಆಗಮಿಸಿ ವರಾಂಡದಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಗೈದಿರುವುದಲ್ಲದೆ, ಪುತ್ರನನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿರುವುದಾಗಿಯೂ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



