ವಾರಣಾಸಿ: ಕಾಶಿ 'ಪೂರ್ವಾಂಚಲ್‌ನ ಆರ್ಥಿಕ ನಕ್ಷೆ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿ ವೇಗಗೊಂಡಿದೆ. ಕಾಶಿ ಕೇವಲ 'ಪ್ರಾಚೀನ ನಗರವಲ್ಲ, ಪ್ರಗತಿಪರ ನಗರವೂ ಆಗಿದೆ' ಎಂದು ಶುಕ್ರವಾರ ಹೇಳಿದ್ದಾರೆ.
ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ನಂತರ ಭೋಜ್‌ಪುರಿಯಲ್ಲಿ ವಾರಣಾಸಿಯ ಜನರನ್ನು ಉದ್ದೇಶಿಸಿ ಮಾತನಾಡಿದರು.
'ಕಾಶಿಯ ನನ್ನ ಕುಟುಂಬ ಸದಸ್ಯರಿಗೆ ನಾನು ನಮಸ್ಕರಿಸುತ್ತೇನೆ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಗೌರವಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಕಾಶಿ ನನಗೆ ಸೇರಿದ್ದು, ನಾನು ಕಾಶಿಗೆ ಸೇರಿದವನು. ಸಂಕಟಮೋಚನ ಮಹಾರಾಜರ ಕಾಶಿಯಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ' ಎಂದು ಪ್ರಧಾನಿ ಮೋದಿ ಹೇಳಿದರು.
'ನಾಳೆ ಹನುಮ ಜಯಂತಿ ಆಚರಿಸಲಾಗುವುದು ಮತ್ತು ಇಂದು, ಸಂಕಟಮೋಚನ ಮಹಾರಾಜರ ಕಾಶಿಯಲ್ಲಿ ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅಭಿವೃದ್ಧಿಯ ಹಬ್ಬವನ್ನು ಆಚರಿಸಲು ಕಾಶಿಯ ಜನರು ಇಂದು ಇಲ್ಲಿ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಕಾಶಿ ಈಗ ಕೇವಲ ಪ್ರಾಚೀನ ನಗರವಾಗಿ ಉಳಿದುಕೊಂಡಿಲ್ಲ, ಬದಲಿಗೆ ಪ್ರಗತಿಪರ ನಗರವೂ ಆಗಿದೆ. ಕಾಶಿ ಈಗ ಪೂರ್ವಾಂಚಲ್‌ನ ಆರ್ಥಿಕ ನಕ್ಷೆಯ ಕೇಂದ್ರದಲ್ಲಿದೆ. ಸಂಪರ್ಕ ಹೆಚ್ಚಿಸಲು ಅನೇಕ ಮೂಲಸೌಕರ್ಯ ಯೋಜನೆಗಳು, ಪ್ರತಿ ಮನೆಗೂ 'ನಲ್ ಸೀ ಜಲ್' ಒದಗಿಸುವುದು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಕ್ರೀಡಾ ಸೌಲಭ್ಯಗಳ ವಿಸ್ತರಣೆ ಮತ್ತು ಪ್ರತಿ ಪ್ರದೇಶ, ಪ್ರತಿ ಕುಟುಂಬ ಮತ್ತು ಪ್ರತಿಯೊಬ್ಬ ಯುವಕರಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಇಂದು ಉದ್ಘಾಟನೆಗೊಂಡ ಈ ಯೋಜನೆಗಳದ್ದಾಗಿವೆ' ಎಂದು ಅವರು ಹೇಳಿದರು.




