ತಿರುವನಂತಪುರಂ: ಕೇರಳ ಕೇಡರ್‍ನ ಮಾಜಿ ಐಎಎಸ್ ಅಧಿಕಾರಿ ಅಲ್ಕೇಶ್ ಕುಮಾರ್ ಶರ್ಮಾ ಅವರನ್ನು ಕೇಂದ್ರ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ (ಪಿಇಎಸ್‍ಬಿ) ಸದಸ್ಯರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ನೇಮಕಾತಿಯನ್ನು ಅನುಮೋದಿಸಿದೆ.
ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಹಿರಿಯ ನಿರ್ವಹಣಾ ಹುದ್ದೆಗಳಿಗೆ ನೇಮಕಾತಿಗಳ ಕುರಿತು ಸರ್ಕಾರಕ್ಕೆ ತಜ್ಞರ ಸಲಹೆ ನೀಡುವುದು ಪಿಇಎಸ್‍ಬಿಯ ಪಾತ್ರವಾಗಿದೆ.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಸಿಪಿಎಸ್.ಇ.) ನೇಮಕಾತಿಗಳ ಮೇಲ್ವಿಚಾರಣೆಗೆ ಅನುಭವಿ ಮತ್ತು ಸಮರ್ಥ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಸಿಪಿ.ಎಸ್.ಇ ಗಳ ಕಾರ್ಯಾಚರಣೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಲಾಗುತ್ತದೆ. ಇದು ದೇಶದ ತ್ವರಿತ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುವ ಘಟಕವಾಗಿದೆ.
1990 ರ ಬ್ಯಾಚ್ ಐಎಎಸ್ ಅಧಿಕಾರಿಯಾದ ಅಲ್ಕೇಶ್ ಕುಮಾರ್ ಶರ್ಮಾ, ಕೇಂದ್ರ ಮತ್ತು ಕೇರಳದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳು ಸಾಟಿಯಿಲ್ಲ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿ, ನೀತಿಗಳನ್ನು ರೂಪಿಸುವ ಮತ್ತು ಅವುಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವ ಅವರ ಸಾಮಥ್ರ್ಯವನ್ನು ಹೆಚ್ಚು ಪ್ರಶಂಸಿಸಲಾಗಿದೆ. ಅಲ್ಕೇಶ್ ಕುಮಾರ್ ಶರ್ಮಾ ಅವರು ಕೇಂದ್ರ ಸಂಪುಟ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಅವರು, ಸಾರ್ವಜನಿಕ ವಲಯದ ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಸಾರ್ವಜನಿಕ ಹಣಕಾಸು, ಕೈಗಾರಿಕೆ, ನಗರಾಭಿವೃದ್ಧಿ ಇತ್ಯಾದಿಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ.ಐ.ಸಿಡಿಸಿ) ನ ಸಿಇಒ ಮತ್ತು ಎಂ.ಡಿ.ಯಾಗಿ ಸೇವೆ ಸಲ್ಲಿಸಿರುವ ಅಲ್ಕೇಶ್ ಕುಮಾರ್ ಶರ್ಮಾ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್.ಐ.ಸಿ.ಡಿ.ಐ.ಟಿ) ನ ಸಿಇಒ ಕೂಡ ಆಗಿದ್ದರು.
ಅವರು ನೀತಿ ಆಯೋಗ ರಚಿಸಿದ ಕಾರ್ಯಕ್ರಮ/ಯೋಜನಾ ನಿರ್ವಹಣೆಯ ಕಾರ್ಯಪಡೆಯ ಸದಸ್ಯರೂ ಆಗಿದ್ದರು. ಅವರು ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷರಾಗಿದ್ದರು ಮತ್ತು ಟೋಲ್ ಸಂಗ್ರಹದಲ್ಲಿ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ (ಯುಎನ್‍ಡಿಪಿ) ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗಾಗಿ ರಾಷ್ಟ್ರೀಯ ಯೋಜನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.
ಅವರು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆಎಸ್‍ಐಡಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸೆಪ್ಟೆಂಬರ್ 2019 ರಿಂದ ಮಾರ್ಚ್ 2021 ರವರೆಗೆ ಕೇರಳದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ವಿಶೇಷ ಯೋಜನೆಗಳು-ಮೂಲಸೌಕರ್ಯ ಮತ್ತು ಕೈಗಾರಿಕೆಗಳು) ಸೇವೆ ಸಲ್ಲಿಸಿದರು, ಹಲವಾರು ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಿದರು.


