ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರವು, ಭಾರತದಿಂದ ನೆರೆಯ ದೇಶಕ್ಕೆ 'ಒಂದು ಹನಿ ನೀರು' ಹರಿಯದಂತೆ ಖಾತ್ರಿಪಡಿಸಿಕೊಳ್ಳಲು ಸಮಗ್ರ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಶುಕ್ರವಾರ ಹೇಳಿದೆ.
ಗೃಹ ಸಚಿವ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ 1960ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ನಿರ್ಧಾರದ ಅನುಷ್ಠಾನ ಕುರಿತು ಸಭೆ ನಡೆಸಿದರು.
ಈ ವೇಳೆ ಜಲಸಂಪನ್ಮೂಲ ಮತ್ತು ವಿದ್ಯುತ್ ಸಚಿವಾಲಯಗಳ ಅಧಿಕಾರಿಗಳಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಅಂಶಗಳ ಕಾರ್ಯತಂತ್ರ ಸಿದ್ಧಪಡಿಸಲು ಸೂಚಿಸಲಾಗಿದೆ.
'ಸಿಂಧೂ ನದಿಯ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ತಲುಪದಂತೆ ನೋಡಿಕೊಳ್ಳಲು ಸಭೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಅಲ್ಪಾವಧಿಯ, ಮಧ್ಯಮ ಅವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹೋಗದು' ಎಂದು ಸಭೆಯ ನಂತರ ಸಚಿವ ಸಿ.ಆರ್. ಪಾಟೀಲ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಮಿತ್ ಶಾ ಅವರು ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆಯಲು ನದಿ ನೀರನ್ನು ಬೇರೆಡೆ ತಿರುಗಿಸಲು ಮತ್ತು ನದಿಗಳ ಹೂಳು ತೆಗೆಯುವಂತಹ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
'ಸಿಂಧೂ ನದಿ ನೀರಿನ ಒಪ್ಪಂದದ ಬಗ್ಗೆ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಲ್ಲಿ ಸಂಪೂರ್ಣ ರಾಷ್ಟ್ರೀಯ ಹಿತಾಸಕ್ತಿ ಇದೆ. ಸಿಂಧೂ ನದಿಯ ನೀರಿನ ಒಂದು ಹನಿಯು ಪಾಕಿಸ್ತಾನವನ್ನು ತಲುಪುವುದಿಲ್ಲವೆಂದು ನಾವು ಖಾತ್ರಿಪಡಿಸುತ್ತೇವೆ' ಎಂದು ಪಾಟೀಲ್ 'ಎಕ್ಸ್'ನಲ್ಲೂ ಪೋಸ್ಟ್ ಮಾಡಿದ್ದಾರೆ.




