ಕುಂಬಳೆ: ತಲಪ್ಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಕುಂಬಳೆಯಲ್ಲಿ ಟೋಲ್ ಬೂತ್ ಸ್ಥಾಪಿಸುವ ಕ್ರಮವನ್ನು ವಿರೋಧಿಸಿ ಸೋಮವಾರ ಕುಂಬಳೆಯಲ್ಲಿ ಸರ್ವಪಕ್ಷಗಳ ಪ್ರತಿಭಟನೆ ನಡೆಯಲಿದ್ದು, ಕಾಸರಗೋಡು ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ನೇತೃತ್ವದ ಮುಖಂಡರು ಕ್ರಿಯಾ ಸಮಿತಿ ಅಧ್ಯಕ್ಷ, ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸೂಚನೆಯಂತೆ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕನ ನಡೆಸಿದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರನ್ನು ಭೇಟಿಯಾಗಿ ಅವರು ಚರ್ಚಿಸಿದರು.
ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇರಳ ಪ್ರಾದೇಶಿಕ ಅಧಿಕಾರಿ ಬಿ.ಎಲ್. ಮೀನಾ ಅವರನ್ನು ಸಂಪರ್ಕಿಸಿದರು. ಮೀನಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜನರು ಎದುರಿಸುತ್ತಿರುವ ಸಂಭಾವ್ಯ ಕಷ್ಟಗಳ ಬಗ್ಗೆ ಅರಿವು ಮಾಹಿತಿ ನಿಡಿದರು.
ಕೇರಳ-ಕರ್ನಾಟಕ ಗಡಿಯಲ್ಲಿರುವ ತಲಪ್ಪಾಡಿಯಲ್ಲಿ ಟೋಲ್ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅರವತ್ತು ಕಿಲೋಮೀಟರ್ ಮಾನದಂಡವನ್ನು ಉಲ್ಲಂಘಿಸಿ ಟೋಲ್ ನಿರ್ಮಿಸುವ ಸನ್ನದ್ದತೆಗಳು ಸಾಗುತ್ತಿದೆ. ಕೇವಲ ಇಪ್ಪತ್ತು ಕಿಲೋಮೀಟರ್ ದೂರಕ್ಕೆ ಟೋಲ್ ವಿಧಿಸುವುದು ಸಮರ್ಥನೀಯವಲ್ಲ ಎಂದು ಸಂಸದರು ಹೇಳಿದರು. ರಾಷ್ಟ್ರೀಯ ಹೆದ್ದಾರಿಯ ಕೊನೆಯ ಭಾಗವನ್ನು ಪೂರ್ಣಗೊಳಿಸದೆಯೇ ಟೋಲ್ ಸಂಗ್ರಹಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ನದಿಯ ಹತ್ತಿರ ಈ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಟೋಲ್ ಬೂತ್ ಸ್ಥಾಪಿಸುವುದರಿಂದ ಭಾರಿ ಸಂಚಾರ ದಟ್ಟಣೆ ಮತ್ತು ತೊಂದರೆ ಉಂಟಾಗುತ್ತದೆ ಎಂದು ಸಂಸದರು ಅವರಿಗೆ ತಿಳಿಸಿದರು. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ದೆಹಲಿಗೆ ಹೋಗಿ ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಸಂಸದರು ಹೇಳಿದರು. ಈ ಸಂದರ್ಭ ಲೋಕನಾಥ ಶೆಟ್ಟಿ, ಬಿ.ಎನ್. ಮುಹಮ್ಮದ್ ಅಲಿ, ಕೆ.ವಿ. ಯೂಸುಫ್ ತಂಡದಲ್ಲಿದ್ದರು.

.jpg)
.jpg)
