ಕಾಸರಗೋಡು: ಬಿಎಂಎಸ್ ಕಾಸರಗೊಡು ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಕೀಲ ಪಿ. ಸುಹಾಸ್(38)ಕೊಲೆ ಪ್ರಕರಣದ ವಿಚಾರಣೆಗೆ ಸರ್ಕಾರಪರ ವಾದಿಸಲು ನಿಯೋಜಿತರಾಗಿದ್ದ ಸ್ಪೆಶ್ಯಲ್ ಪ್ರೋಸಿಕ್ಯೂಟರ್ ಜೋಸೆಫ್ ಥಾಮಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆರೋಗ್ಯಪರ ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ಪೆಶ್ಯಲ್ ಪ್ರೋಸಿಕ್ಯೂಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೆನ್ನಲಾಗಿದೆ. ಇವರ ಸ್ಥಾನಕ್ಕೆ ಪಬ್ಲಿಕ್ ಪ್ರೋಸಿಕ್ಯೂಟರ್ ಕೆ. ಅಜಿತ್ ಕುಮಾರ್ ಅವರನ್ನು ನೇಮಿಸಿ ರಾಜ್ಯ ಗೃಹಖಾತೆ ನಿರ್ದೇಶ ನೀಡಿದೆ.
ಸುಹಾಸ್ ಕೊಲೆಪ್ರಕರಣದ ಬಗ್ಗೆ ವಾದಿಸಲು ವಕೀಲ ಪಿ. ಪ್ರೇಮರಾಜನ್ ಅವರನ್ನು ನೇಮಿಸುವಂತೆ ಕೋರಿ ಕೊಲೆಯಾದ ಸುಹಾಸ್ ಅವರ ತಾಯಿ ಪ್ರೇಮಾ ಅವರು ಸಲ್ಲಿಸಿರುವ ಅರ್ಜಿ ಸರ್ಕಾರದ ಪರಿಶೀಲನೆಯಲ್ಲಿದೆ.
2008 ಏ. 17ರಂದು ವಕೀಲ ಪಿ.ಸುಹಾಸ್ ಅವರನ್ನು ಮಾರಕಾಯುಧಗಳೊಂದಿಗೆ ಸುತ್ತುವರಿದ ತಂಡ ಬರ್ಬರವಾಗಿ ಕಡಿದು ಕೊಲೆಗೈದಿತ್ತು. ಆರಂಭದಲ್ಲಿ ಕಾಸರಗೋಡು ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಂತರ ಕ್ರೈಂ ಬ್ರಾಂಚ್‍ಗೆ ವಹಿಸಿಕೊಡಲಾಗಿತ್ತು. ಕ್ರೈಂಬ್ರಾಂಚ್ ತಲಶ್ಯೇರಿಯ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‍ಶೀಟ್‍ನಲ್ಲಿ ವಿದ್ಯಾನಗರದ ಬಿ.ಎಂ ರಫೀಕ್, ಕಾಸರಗೋಡು ಮಾರ್ಕೆಟ್ ರಸ್ತೆಯ ಎ.ಎ ಅಬ್ದುಲ್ ರಹಮಾನ್, ಕಾಸರಗೋಡು ಎರಿಯಾಲ್‍ನ ಕೆ.ಇ ರಫೀಕ್, ಅಬ್ದುಲ್‍ರಹಮಾನ್ ಅಲಿಯಾಸ್ ರಹೀಂ, ಕಸರಗೋಡು ಎಂ.ಜಿ ರಸ್ತೆಯ ಅಹಮ್ಮದ್ ಶಿಹಾಬ್ ಹಾಗೂ ನಗರದ ಕರಿಪ್ಪೊಡಿ ರಸ್ತೆಯ ಅಹಮ್ಮದ್ ಸಫ್ವಾನ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕೊಲೆಯಾದ ವಕೀಲ ಪಿ. ಸುಹಾಸ್





