ಇಂಫಾಲ: ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಿಷೇಧಿತ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ₹22 ಲಕ್ಷಕ್ಕೂ ಹೆಚ್ಚು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇಂಫಾಲ ಪೂರ್ವ ಜಿಲ್ಲೆಯ ವಾಂಗ್ಖೈ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್)ನ ಉಗ್ರನನ್ನು ಬಂಧಿಸಲಾಯಿತು. ಆತನಿಂದ 15 ಜೀವಂತ ಗುಂಡುಗಳು ಮತ್ತು ಒಂದು ಬೆರೆಟಾ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಉಗ್ರನ ಅಡಗುತಾಣದ ಮೇಲೆ ನಡೆಸಿದ ದಾಳಿಯಲ್ಲಿ ಒಂದು ಎಸ್‌ಎಂಜಿ ಕಾರ್ಬೈನ್ ಗನ್, ಒಂದು 9 ಎಂಎಂ ಪಿಸ್ತೂಲ್, ನಾಲ್ಕು ಮ್ಯಾಗಜೀನ್, ಒಂದು ಹ್ಯಾಂಡ್ ಗ್ರೆನೇಡ್, 66 ಜೀವಂತ ಗುಂಡು ಮತ್ತು ₹69,000 ನಗದು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಂಫಾಲ ಖುಂದ್ರಕ್ಪಂ ಅವಾಂಗ್ ಲೈಕೈ ಪ್ರದೇಶದಲ್ಲಿ ಯುಎನ್‌ಎಲ್‌ಎಫ್ ಸಂಘಟನೆಯ ಮತ್ತೊಬ್ಬ ಉಗ್ರನನ್ನು ಬಂಧಿಸಲಾಯಿತು. ಆತನಿಂದ ₹21,50,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.





