ನವದೆಹಲಿ: ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿಯಂತಹ (ಎಸ್‌ಎಂಎ) ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ನೀಡುವ ₹50 ಲಕ್ಷ ಮೊತ್ತದ ನೆರವಿನ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, 'ನೆರವಿನ ಮಿತಿಯ ಕುರಿತಾದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ನೇತೃತ್ವದ ಪೀಠವು ಮೇ 13ರಿಂದ ಪ್ರಾರಂಭವಾಗುವ ವಾರದಲ್ಲಿ ವಿಚಾರಣೆ ನಡೆಸಲಿದೆ' ಎಂದು ಹೇಳಿದೆ.
ಕೇಂದ್ರ ಸರ್ಕಾರ ನೆರವಿನ ಮೊತ್ತ ಹೆಚ್ಚಿಸಬೇಕೆಂದು ಕೋರಿ ಕೇರಳದ ನಿವಾಸಿ, ಎಸ್‌ಎಂಎಯಿಂದ ಬಳಲುತ್ತಿರುವ 24 ವರ್ಷದ ಸೆಬಾ ಪಿ.ಎ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ₹50 ಲಕ್ಷ ನೆರವು ಮಾತ್ರವಲ್ಲದೆ, ಸೆಬಾಗೆ ಹೆಚ್ಚುವರಿಯಾಗಿ ₹18 ಲಕ್ಷ ಮೊತ್ತದ ಔಷಧಿ ಒದಗಿಸುವಂತೆಯೂ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.
₹ 50 ಲಕ್ಷ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್, ಫೆಬ್ರುವರಿ 24ರಂದು ಹೈಕೋರ್ಟ್ ಆದೇಶವನ್ನು ತಡೆಹಿಡಿದಿತ್ತು.




