HEALTH TIPS

ಸುಂಕ ಸಮರ | ಜಾಗತಿಕ ವ್ಯಾಪಾರಕ್ಕೆ ಪೆಟ್ಟು: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಅಮೆರಿಕದ ಪ್ರತಿ ಸುಂಕ ನೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟು ಶೇ 3ರಷ್ಟು ಕುಗ್ಗಲಿದೆ ಎಂದು ವಿಶ್ವಸಂಸ್ಥೆಯ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ವಾರ ಭಾರತ ಸೇರಿ ವಿವಿಧ ದೇಶಗಳ ಮೇಲೆ ಭಾರಿ ಪ್ರಮಾಣದಲ್ಲಿ ಪ್ರತಿ ಸುಂಕ ಘೋಷಿಸಿದ್ದರು.

ಬಳಿಕ ಶ್ವೇತಭವನ ಆಡಳಿತವು ಚೀನಾ ಹೊರತುಪಡಿಸಿ ಇತರೆ ರಾಷ್ಟ್ರಗಳ ಮೇಲೆ ಹೇರಿದ್ದ ಪ್ರತಿ ಸುಂಕ ಜಾರಿಗೆ 90 ದಿನಗಳವರೆಗೆ ವಿರಾಮ ಘೋಷಿಸಿದೆ.

ಟ್ರಂಪ್‌ ಆಡಳಿತ ನೀತಿಯು ದೀರ್ಘಕಾಲದಲ್ಲಿ ವ್ಯಾಪಾರ ವಿಧಾನಗಳು ಮತ್ತು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅಮೆರಿಕ ಮತ್ತು ಚೀನಾ ನಡುವೆ ಸುಂಕ ಸಮರ ನಡೆಯುತ್ತಿದೆ. ಇದರಿಂದ ಈ ದೇಶಗಳ ಮಾರುಕಟ್ಟೆಯನ್ನು ಅವಲಂಭಿಸಿರುವ ರಫ್ತು ಭಾರತ, ಕೆನಡಾ ಮತ್ತು ಬ್ರೆಜಿಲ್‌ ಮಾರುಕಟ್ಟೆಗಳಿಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕಿ ಪಮೇಲಾ ಕೋಕ್‌ ಹ್ಯಾಮಿಲ್ಟನ್ ಹೇಳಿದ್ದಾರೆ.

ಮೆಕ್ಸಿಕೊ ಕೂಡ ಸುಂಕದ ಸುಳಿಗೆ ಸಿಲುಕಿದೆ. ಇಲ್ಲಿಂದ ಅಮೆರಿಕ, ಚೀನಾ, ಯೂರೋಪ್‌ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳಿಗೆ ರಫ್ತು ವಹಿವಾಟು ನಡೆಯುತ್ತದೆ. ಸದ್ಯ ಮೆಕ್ಸಿಕೊ ರಫ್ತಿನಿಂದ ಕೆನಡಾ, ಬ್ರೆಜಿಲ್‌ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಯಿದೆ. ಭಾರತಕ್ಕೆ ಇದರಿಂದ ಅಲ್ಪ ಪ್ರಮಾಣದಲ್ಲಿ ಲಾಭವಾಗಲಿದೆ ಎಂದು ಹೇಳಿದ್ದಾರೆ.

ವಿಯೆಟ್ನಾಂ ದೇಶದ ರಫ್ತು ವಹಿವಾಟು ಅಮೆರಿಕ, ಮೆಕ್ಸಿಕೊ ಮತ್ತು ಚೀನಾದ ಬದಲು ಮಧ್ಯ ಏಷ್ಯಾ, ಉತ್ತರ ಅಮೆರಿಕದ ಮಾರುಕಟ್ಟೆಯತ್ತ ಹೊರಳುವ ನಿರೀಕ್ಷೆಯಿದೆ ಎಂದು ವಿವರಿಸಿದ್ದಾರೆ.

ಬಹುಮುಖ್ಯವಾಗಿ ಸಿದ್ಧಉಡುಪು ರಫ್ತಿನ ಮೇಲೆ ಟ್ರಂಪ್‌ ಸುಂಕ ನೀತಿಯು ಹೆಚ್ಚಿನ ಪರಿಣಾಮ ಬೀರಲಿದೆ. ಬಾಂಗ್ಲಾದೇಶವು ಇಡೀ ವಿಶ್ವದಲ್ಲಿಯೇ ಸಿದ್ಧಉಡುಪುಗಳ ರಫ್ತಿನಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಅದರ ಮೇಲೆ ಶೇ 37ರಷ್ಟು ಪ್ರತಿ ಸುಂಕ ವಿಧಿಸಲಾಗಿದೆ. ಇದು ಅಮೆರಿಕಕ್ಕೆ 2029ರ ವೇಳೆಗೆ ₹28 ಸಾವಿರ ಕೋಟಿ ರಫ್ತು ನಷ್ಟ ಉಂಟು ಮಾಡಲಿದೆ ಎಂದು ಹೇಳಿದ್ದಾರೆ.

ಆರ್ಥಿಕತೆಗೆ ಧಕ್ಕೆ: ಫ್ರೆಂಚ್‌ನ ಆರ್ಥಿಕ ಸಂಶೋಧನಾ ಸಂಸ್ಥೆಯಾದ ಸಿಇಪಿಐಐ ಅಂದಾಜಿನ ಪ್ರಕಾರ, ಅಮೆರಿಕದ ಸುಂಕ ನೀತಿಯು ಜಾಗತಿಕ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ಜಾಗತಿಕ ಜಿಡಿಪಿ ಶೇ 0.7ರಷ್ಟು ಕುಸಿತಕ್ಕೆ ಕಾರಣವಾಗಲಿದೆ ಎಂದು ಹೇಳಿದೆ.

ಮೆಕ್ಸಿಕೊ, ಚೀನಾ ಮತ್ತು ಥೈಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಹೆಚ್ಚು ತೊಂದರೆಗೆ ಸಿಲುಕುತ್ತವೆ ಎಂದು ಹೇಳಲಾಗಿದೆ.

ದ್ವಿಪಕ್ಷೀಯ ವ್ಯಾ‍ಪಾರ: ಮಧ್ಯಂತರ ಒಪ್ಪಂದ ಅಂತಿಮ ಸಾಧ್ಯತೆ

ನವದೆಹಲಿ: ಸುಂಕ ವಿರಾಮದ ಅವಧಿಯಲ್ಲಿ ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಒಪ್ಪಂದವು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಉಭಯ ದೇಶಗಳ ನಡುವೆ ವ್ಯಾ‍ಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಯ ಷರತ್ತುಗಳು ಅಂತಿಮಗೊಂಡಿವೆ ಎಂದು ಹೇಳಿದ್ದಾರೆ.

ಎರಡು ದೇಶಗಳು ವ್ಯಾ‍ಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ತೊಡಗಿವೆ. ಸೆಪ್ಟೆಂಬರ್‌- ಅಕ್ಟೋಬರ್‌ ವೇಳೆಗೆ ಮೊದಲ ಹಂತದ ಒಪ್ಪಂದವು ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಸದ್ಯ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಮೌಲ್ಯ ₹16.44 ಲಕ್ಷ ಕೋಟಿ ಇದೆ. 2030ರ ವೇಳೆಗೆ ಇದನ್ನು ₹43 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಭಾರತವು ಅಮೆರಿಕವಷ್ಟೇ ಅಲ್ಲದೆ ಇತರೆ ದೇಶಗಳೊಟ್ಟಿಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries