ವಾಟ್ಸ್‌ಆಯಪ್ ಗ್ರೂಪ್‌ನ ಸದಸ್ಯರು ಹಾಕುವ ಸಂದೇಶ ಅಥವಾ ಪೋಸ್ಟ್‌ಗಳಿಗೆ, ಗ್ರೂಪ್‌ನ ಅಡ್ಮಿನ್ ನೇರ ಹೊಣೆಗಾರರಾಗುವುದಿಲ್ಲ. ಆದರೆ ಅಂತಹ ಸಂದೇಶಗಳನ್ನು ಅನುಮೋದಿಸಿ ಪ್ರತಿಕ್ರಿಯೆ ನೀಡಿದ್ದರೆ, ಶಿಕ್ಷೆ ವಿಧಿಸಲು ಅವಕಾಶವಿದೆ.
ವಾಟ್ಸ್‌ಆಯಪ್ ಗ್ರೂಪ್‌ಗಳಲ್ಲಿ ಹಂಚಿಕೆಯಾಗುವ ಸಂದೇಶ, ಚಿತ್ರ, ವಿಡಿಯೊಗಳ ನಿಯಂತ್ರಣಕ್ಕೆ ದೇಶದಲ್ಲಿ ಯಾವುದೇ ಪ್ರತ್ಯೇಕ ಕಾನೂನುಗಳು ಇಲ್ಲ.
ಆದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2020ರಲ್ಲಿ ತಿದ್ದುಪಡಿ ತಂದು, ವಾಟ್ಸ್‌ಆಯಪ್ ಗ್ರೂಪ್‌ನ ಅಡ್ಮಿನ್‌ಗಳನ್ನೇ ಹೊಣೆಗಾರರನ್ನಾಗಿಸಲು ಕೇಂದ್ರ ಸರ್ಕಾರವು ಕಾನೂನಿನಲ್ಲಿ ಅವಕಾಶ ಮಾಡಿಕೊಂಡಿತ್ತು.
ಈ ಕಾಯ್ದೆಯ 67ನೇ ಸೆಕ್ಷನ್ ಅಡಿಯಲ್ಲಿ ವಾಟ್ಸ್‌ಆಯಪ್ ಗ್ರೂಪ್‌ನ ಅಡ್ಮಿನ್ ಅವರನ್ನು 'ಮಧ್ಯಸ್ಥಿಕೆದಾರ' ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ವ್ಯಾಖ್ಯಾನಿಸಿತ್ತು. ಅದರಂತೆ, ಗ್ರೂಪ್‌ನ ಸದಸ್ಯರು ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶ, ಅನುಮತಿ ಇಲ್ಲದೆ ವ್ಯಕ್ತಿಗಳ ಚಿತ್ರ-ವಿಡಿಯೊ, ದ್ವೇಷ ಪ್ರಚೋದಿಸುವಂತಹ ಸಂದೇಶ, ದೇಶದ್ರೋಹದ ಸಂದೇಶ-ಪೋಸ್ಟ್‌ಗಳನ್ನು ಮಾಡಿದರೆ ಅದಕ್ಕೆ ಅಡ್ಮಿನ್ ನೇರ ಹೊಣೆಯಾಗುತ್ತಿದ್ದರು.
ಈ ವ್ಯಾಖ್ಯಾನದಂತೆ ವಾಟ್ಸ್‌ಆಯಪ್ ಗ್ರೂಪ್‌ನ ಅಡ್ಮಿನ್‌ಗಳ ವಿರುದ್ಧ ದೇಶದಾದ್ಯಂತ ಹಲವು ಪ್ರಕರಣಗಳು ದಾಖಲಾಗಿದ್ದವು. ಅವುಗಳ ವಿರುದ್ಧ ಕೆಲವರು ನ್ಯಾಯಾಲಯಗಳ ಮೆಟ್ಟಿನಲ್ಲೂ ಹತ್ತಿದ್ದರು. 2022ರಲ್ಲಿ ದಾಖಲಾದ ಅಂತಹ ಅರ್ಜಿಯೊಂದರಲ್ಲಿ ಕೇರಳ ಹೈಕೋರ್ಟ್ ನೀಡಿದ ತೀರ್ಪು, ವಾಟ್ಸ್‌ಆಯಪ್ ಗ್ರೂಪ್‌ನ ಅಡ್ಮಿನ್‌ಗಳಿಗೆ ಈ ನಿಯಮದಿಂದ ತುಸು ರಕ್ಷಣೆ ನೀಡಿತು.
'ಮ್ಯಾನುಯಲ್ ವರ್ಸಸ್ ಕೇರಳ ಸರ್ಕಾರ' ಪ್ರಕರಣದಲ್ಲಿ ಕೇರಳ ಹೈಕೋರ್ಟ್, 'ವಾಟ್ಸ್‌ಆಯಪ್ ಗ್ರೂಪ್‌ಗೆ ಸದಸ್ಯರನ್ನು ಸೇರಿಸುವ ಮತ್ತು ತೆಗೆಯುವುದಕ್ಕಷ್ಟೇ ಅಡ್ಮಿನ್‌ನ ಅಧಿಕಾರ ಸೀಮಿತಗೊಳ್ಳುತ್ತದೆ. ಸದಸ್ಯರು ಹಾಕುವ ಸಂದೇಶವನ್ನು ಪರಿಶೀಲಿಸಿ, ಅದನ್ನು ಪ್ರಕಟಿಸುವ ವ್ಯವಸ್ಥೆ ವಾಟ್ಸ್‌ಆಯಪ್‌ನಲ್ಲಿ ಇಲ್ಲ. ಹೀಗಾಗಿ ಎಲ್ಲ ಸಂದೇಶಗಳಿಗೂ ಅಡ್ಮಿನ್ ಅನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ' ಎಂದು ತೀರ್ಪು ನೀಡಿತ್ತು.
'ಆದರೆ ಸ್ವತಃ ಅಡ್ಮಿನ್ ಅಂತಹ ಸಂದೇಶಗಳನ್ನು ಹಾಕಿದ್ದರೆ ಅಥವಾ ಹಾಕುವಂತೆ ಪ್ರಚೋದನೆ ನೀಡಿದ್ದರೆ ಅವರು ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ' ಎಂದೂ ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪೇ ಈಗ ದೇಶದಾದ್ಯಂತ ಅನ್ವಯವಾಗುತ್ತಿದೆ.
ಯಾವ ಪ್ರಕರಣಗಳಲ್ಲಿ ಅಡ್ಮಿನ್ ತಪ್ಪಿತಸ್ಥ?
ಅವಹೇಳನಕಾರಿ ಸಂದೇಶ, ವ್ಯಕ್ತಿಗಳ ಖಾಸಗಿ ಚಿತ್ರ-ವಿಡಿಯೊ, ತಿರುಚಲಾದ ಚಿತ್ರ-ವಿಡಿಯೊ, ದೇಶದ್ರೋಹದ ಸಂದೇಶ, ಸುಳ್ಳು ಸುದ್ದಿಗಳನ್ನು ಸದಸ್ಯರು ಹಾಕಿದರೆ ಆ ಬಗ್ಗೆ ಎಚ್ಚರಿಕೆ ನೀಡಬೇಕು
ಆಕ್ಷೇಪಾರ್ಹ ಸಂದೇಶ/ಚಿತ್ರ/ವಿಡಿಯೊಗಳನ್ನು ಹಾಕುವಂತೆ ಸದಸ್ಯರಿಗೆ ಸೂಚಿಸಿದ್ದರೆ ಅಥವಾ ಪ್ರಚೋದಿಸಿದ್ದರೆ ಅಡ್ಮಿನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು
ಗ್ರೂಪ್‌ನಲ್ಲಿ ಹಂಚಿಕೊಳ್ಳಲಾದ ಆಕ್ಷೇಪಾರ್ಹ ಸಂದೇಶ/ಚಿತ್ರ/ವಿಡಿಯೊಗಳಿಗೆ 'ಲೈಕ್' ಪ್ರತಿಕ್ರಿಯೆ ನೀಡಿದ್ದರೆ, ಅವುಗಳನ್ನು ಫಾರ್ವರ್ಡ್ ಮಾಡಿದ್ದರೆ ಅಡ್ಮಿನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು
ಗ್ರೂಪ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್/ಸಂದೇಶಗಳ ಸಂಬಂಧ ಪ್ರಕರಣ ದಾಖಲಾದ ನಂತರ ಅವುಗಳನ್ನು ಗ್ರೂಪ್‌ನಿಂದ ಡಿಲಿಟ್ ಮಾಡಿದರೆ, ಸದಸ್ಯರನ್ನು ಗ್ರೂಪ್‌ನಿಂದ ತೆಗೆದುಹಾಕಿದರೆ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಬಹುದು.




