HEALTH TIPS

ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡನ ಹತ್ಯೆ: ಭಾರತ ಖಂಡನೆ

ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡನನ್ನು ಅಪಹರಿಸಿ, ಹತ್ಯೆ ಮಾಡಿರುವ ಪ್ರಕರಣವನ್ನು ಭಾರತ ಶನಿವಾರ ತೀವ್ರವಾಗಿ ಖಂಡಿಸಿದೆ. ಸರ್ಕಾರವು ಅಲ್ಪಸಂಖ್ಯಾತರ ರಕ್ಷಣೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಒತ್ತಾಯಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು, ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ನಾಯಕ ಶ್ರೀ ಭದೇಶ್‌ ಚಂದ್ರ ರಾಯ್‌ ಅವರ ಹತ್ಯೆಯ ಬಗ್ಗೆ ನಾವು ದುಃಖ ವ್ಯಕಪಡಿಸುತ್ತಿದ್ದೇವೆ. ಈ ಹತ್ಯೆಯು ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಹಿಂಸೆಯ ಮಾದರಿಯನ್ನೇ ಅನುಸರಿಸುತ್ತಿದೆ. ಈ ಹಿಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾದವರು ನಿರ್ಭೀತಿಯಿಂದ ಒಡಾಡಿಕೊಂಡಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಹಿಂದೂಗಳು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರನ್ನು ರಕ್ಷಿಸುವ ಹೊಣೆಯನ್ನು ಮಧ್ಯಂತರ ಸರ್ಕಾರವು ಯಾವುದೇ ಮುಲಾಜಿಲ್ಲದೆ, ನಿಭಾಯಿಸಬೇಕು ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇವೆ' ಎಂದು ಒತ್ತಿ ಹೇಳಿದ್ದಾರೆ.

ಮೀಸಲಾತಿ ವಿಚಾರವಾಗಿ ಕಳೆದ ವರ್ಷ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ಹಾಗೂ ಹಿಂಸಾಚಾರ ನಡೆದಿದ್ದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಶೇಖ್‌ ಹಸೀನಾ ಬಾಂಗ್ಲಾದಿಂದ ಪಲಾಯನ ಮಾಡಿದ್ದಾರೆ. ಇದರ ಬೆನ್ನಲ್ಲೇ, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಪ್ರಕರಣಗಳು ಹೆಚ್ಚಾದ ಕಾರಣ, ಭಾರತ ಹಾಗೂ ಬಾಂಗ್ಲಾ ನಡುವಣ ಬಾಂಧವ್ಯ ಹದಗೆಟ್ಟಿದೆ.

ಢಾಕಾದಿಂದ ಸುಮಾರು 330 ಕಿಲೋಮೀಟರ್ ದೂರದಲ್ಲಿರುವ ದಿನಾಜ್‌ಪುರ ಜಿಲ್ಲೆಯ ಬಸುದೇಬ್‌ಪುರ ಗ್ರಾಮದ ಭಬೇಶ್ (58) ಅವರ ಮೃತದೇಹ ಗುರುವಾರ ರಾತ್ರಿ ಪತ್ತೆಯಾಗಿದೆ. ಅದೇ ದಿನ ಸಂಜೆ 4.30ರ ಸುಮಾರಿಗೆ ಭಬೇಶ್‌ ಅವರಿಗೆ ಕರೆ ಬಂದಿತ್ತು. ಸುಮಾರು 30 ನಿಮಿಷಗಳ ನಂತರ, 2 ಬೈಕ್‌ಗಳಲ್ಲಿ ಬಂದ ನಾಲ್ವರು ಅವರನ್ನು ಮನೆಯಿಂದ ಅಪಹರಿಸಿದ್ದರು. ಬಳಿಕ ನರಬರಿ ಗ್ರಾಮಕ್ಕೆ ಕರೆದೊಯ್ದು ಕ್ರೂರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಭದೇಶ್‌ ಅವರು 'ಬಾಂಗ್ಲಾದೇಶ ಪೂಜಾ ಉದ್ಜಪನ್‌ ಪರಿಷತ್ತಿ'ನ ಬಿರಾಲ್‌ ಘಟಕದ ಉಪಾಧ್ಯಕ್ಷರಾಗಿದ್ದು, ಆ ಭಾಗದಲ್ಲಿ ಹಿಂದೂ ಧರ್ಮದ ಪ್ರಮುಖ ನಾಯಕರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries