ಎರ್ನಾಕುಳಂ: ಗುರುವಾಯೂರು ಕೃಷ್ಣನ ಸನ್ನಿಧಿಯಲ್ಲಿ ವಿವಾಹಿತರಾದ ನಂತರ ವಧು, ಬಡ ಕುಟುಂಬದ ಯುವತಿಗೆ ಭರೋಬ್ಬರಿ ಐದು ಪವನು ಚಿನ್ನ ಮತ್ತು ನಾಲ್ಕುವರೆ ಲಕ್ಷ ರೂ. ನಗದು ನೀಡಿ, ಆ ಬಡ ಯುವತಿಯ ವಿವಾಹಕ್ಕೆ ನೆರವಾಗುವ ಮೂಲಕ ಆದರ್ಶ ಮೆರೆದಿದ್ದಾರೆ.
ಎರ್ನಾಕುಳಂ ವೈಪಿಳಿ ನಿವಾಸಿ ಮಣಿಕುಟ್ಟನ್-ಶಾರಿ ದಂಪತಿ ಪುತ್ರಿ ಡಾ. ಐಶ್ವರ್ಯ ಅವರ ವಿವಾಹ ಬುಧವಾರ ಗುರುವಾಯೂರು ದೇಗುಲದಲ್ಲಿ ಆಲಪ್ಪುಳ ನಿವಾಸಿ ಶಂಭು ಅವರ ಜತೆ ನೆರವೇರಿದೆ. ತಾಳಿ ಕಟ್ಟುವ ಮುಹೂರ್ತ ನೆರವೇರಿದ ತಕ್ಷಣ ಆ ವೇದಿಕೆಯಲ್ಲಿ ಇನ್ನೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರ್ನಾಕುಳಂ ಫ್ಯಾಕ್ಟ್ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ, ವಿವಾಹ ನಿಶ್ಚಿತಾರ್ಥ ನಡೆದಿರುವ ಯುವತಿಯೊಬ್ಬಳಿಗೆ ಈ ಚಿನ್ನ ಹಾಗೂ ನಗದು ನೀಡುವ ಕಾರ್ಯಕ್ರಮ ಅದಾಗಿತ್ತು. ಯುವತಿ ವಿವಾಹ ಆ. 17ರಂದು ನೆರವೇರುವ ಮಾಹಿತಿ ಪಾಲಕ್ಕಾಡಿನ ದಯಾ ಚಾರಿಟೇಬಲ್ ಟ್ರಸ್ಟ್‍ನ ಫೇಸ್‍ಬುಕ್ ಮೂಲಕ ಡಾ. ಐಶ್ವರ್ಯಾ ತಿಳಿದುಕೊಂಡಿದ್ದರು. ಅತ್ಯಂತ ಬಡ ಕುಟುಂಬದ ಈ ಯುವತಿಯ ವಿವಾಹವನ್ನು ಟ್ರಸ್ಟ್ ಮೂಲಕ ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ ದಾನಿಗಳ ನೆರವನ್ನು ಯಾಚಿಸಲಾಗಿತ್ತು. ಕಡುಬಡತನದಲ್ಲಿರುವ ಯುವತಿಯ ವಿವಾಹಕ್ಕಾಗಿ ತಾನು ಐದು ಪವನು ಚಿನ್ನ ಮತ್ತು ನಾಲ್ಕುವರೆ ಲಕ್ಷ ರೂ. ಮೊತ್ತವನ್ನು ತನ್ನ ವಿವಾಹ ವೇದಿಕೆಯಲ್ಲಿ ನೀಡುವುದಾಗಿ ಘೋಷಿಸಿದ್ದರು. ತನ್ನ ಭರವಸೆಯಂತೆ ವಿವಾಹ ಸಮಾರಂಭದಲ್ಲಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಯುವತಿಯ ತಾಯಿ ಉಪಸ್ಥಿತಿಯಲ್ಲಿ ಐದು ಪವನು ಚಿನ್ನಾಭರಣ ಹಾಗೂ ನಾಲ್ಕುವರೆ ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಿದ್ದಾರೆ.




