ಕಾಸರಗೋಡು: ನ್ಯಾಯಾಲಯ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದ ತೀರ್ಮಾನವನ್ನು ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳುವಂತೆ ಭಾರತೀಯ ವಕೀಲರ ಪರಿಷತ್ತು ಕಾಸರಗೋಡು ಘಟಕ ಒತ್ತಾಯಿಸಿದೆ. ಏಕಾಏಕಿ ನ್ಯಾಯಾಲಯ ಶುಲ್ಕ ಏರಿಸಿರುವ ಸರ್ಕಾರದ ಧೋರಣೆ ಖಂಡಿಸಿ ಸಂಘಟನೆ ವತಿಯಿಂದ ಕಾಸರಗೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಆಗ್ರಹ ಮಾಡಲಾಯಿತು.
ಸಂಘಟನೆ ರಾಜ್ಯ ಉಪಾಧ್ಯಕ್ಷ ವಕೀಲ ಬಿ. ರವೀಂದ್ರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶುಲ್ಕ ಹೆಚ್ಚಿಸುವ ನಿರ್ಧಾರದ ಮೂಲಕ ಸರ್ಕಾರ, ನ್ಯಾಯ ಕೋರಿ ನ್ಯಾಯಾಲಯಕ್ಕೆ ಹೋಗುವ ಜನಸಾಮಾನ್ಯ ದೋಚಲು ಮುಂದಾಗಿರುವುದು ವಿಪರ್ಯಾಸ. ಉಚಿತ ನ್ಯಾಯ ಒದಗಿಸಬೇಕಾದ ಸರ್ಕಾರ, ನ್ಯಾಯಾಲಯಗಳನ್ನು ಆದಾಯದ ಮೂಲವನ್ನಾಗಿ ಮಾಡಲು ಹೊರಟಿದೆ. ನ್ಯಾಯಾಲಯ ಶುಲ್ಕ ಹೆಚ್ಚಿಸುವ ತೀರ್ಮಾನ ಸಾಮಾನ್ಯ ಜನತೆಗೆ ನ್ಯಾಯ ನಿರಾಕರಣೆಗೆ ಸಮಾನವಾಗಿದೆ ಎಂದು ತಿಳಿಸಿದರು.
ಭಾರತೀಯ ಅಡ್ವೊಕತ್ ಪರಿಷತ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಲ್ಕ ಹೆಚ್ಚಳಗೊಳಿಸುವ ಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ಪ್ರತಿಭಟಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕರುಣಾರನ್‍ನಂಬಿಯಾರ್, ಮುರಳೀಧರನ್, ಸದಾನಂದ ರೈ, ಸದಾನಂದ ಕಾಮತ್, ಬಿ. ಗಣೇಶ್, ಜಯಾ ಅಡೂರ್, ಕೆ.ಎಂ.ಬೀನಾ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ನವೀನ್ ರಾಜ್ ಸ್ವಾಗತಿಸಿದರು. ರಾಹುಲ್ ದಾಸ್ ವಂದಿಸಿದರು.
ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ನ್ಯಾಯಾಲಯ ಶುಲ್ಕ ಏರಿಕೆಯನ್ನು ಪ್ರತಿಭಟಿಸಲಾಯಿತು.


