ನವದೆಹಲಿ: ಭಾರತದ ಭೇಟಿಯ ವೇಳೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.
ಬಳಿಕ ಸೋಮವಾರ ಸಂಜೆ ಪ್ರಧಾನಿ ನಿವಾಸದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಅವರ ಪತ್ನಿ, ಭಾರತದ ಮೂಲದ ಉಷಾ ಅವರಿಗೆ ಔತಣಕೂಟವನ್ನು ಏರ್ಪಡಿಸಲಿದ್ದಾರೆ.
ವಾಣಿಜ್ಯ, ಸುಂಕ, ಪ್ರಾದೇಶಿಕ ಭದ್ರತೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ.
ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ಜೆ.ಡಿ. ವ್ಯಾನ್ಸ್, ಪತ್ನಿ ಉಷಾ ಹಾಗೂ ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ವಿುರಾಬೆಲ್ ಸೋಮವಾರ ಬೆಳಿಗ್ಗೆ 10 ಗಂಟೆಗೆ ಪಾಲಂ ವಾಯುನೆಲೆಯಲ್ಲಿ ಬಂದಿಳಿಯಲಿದ್ದಾರೆ.
ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜೆ.ಡಿ. ವ್ಯಾನ್ಸ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ ಸುಂಕ ಸಮರದ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯಿದೆ.
ದೆಹಲಿಗೆ ಬಂದ ಬಳಿಕ ವ್ಯಾನ್ಸ್ ದಂಪತಿ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಭಾರತೀಯ ಕರಕುಶಲ ವಸ್ತುಗಳ ಮಾರಾಟ ಮಾಡುವ ಶಾಪಿಂಗ್ ಸಂಕೀರ್ಣಕ್ಕೂ ಭೇಟಿ ನೀಡಲಿದ್ದಾರೆ.
ಭಾರತದ ಪ್ರವಾಸದ ವೇಳೆ ಜೈಪುರ ಹಾಗೂ ಆಗ್ರಾಕ್ಕೂ ವ್ಯಾನ್ಸ್ ಕುಟುಂಬ ಪಯಣ ಬೆಳಸಲಿದೆ. ಇತಿಹಾಸ ಪ್ರಸಿದ್ಧ ತಾಜ್‌ಮಹಲ್‌ಗೂ ಭೇಟಿ ನೀಡಲಿದ್ದಾರೆ.
ವ್ಯಾನ್ಸ್ ಅವರೊಂದಿಗೆ ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ಜೊತೆಗಿರಲಿದ್ದಾರೆ.




