HEALTH TIPS

ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ: ಸುನಿತಾ ವಿಲಿಯಮ್ಸ್ ಬಣ್ಣನೆ

ನ್ಯೂಯಾರ್ಕ್: 'ಬಾಹ್ಯಾಕಾಶದಿಂದ ನೋಡುವಾಗ ಭಾರತವು ಅದ್ಭುತವಾಗಿ ಕಾಣಿಸುತ್ತದೆ' ಎಂದು ನಾಸಾ ಗಗನಯಾತ್ರಿ ಸುನಿತಾ ವಿಲಿಯನ್ಸ್‌ ಬಣ್ಣಿಸಿದ್ದಾರೆ. ಮುಂದೊಂದು ದಿನ ಅವಕಾಶ ಸಿಕ್ಕಾಗ ಭಾರತಕ್ಕೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ, 'ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾಗ (ಐಎಸ್‌ಎಸ್‌) ಭಾರತವು ಹೇಗೆ ಕಾಣಿಸುತ್ತದೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಜತೆ ಕೆಲಸ ಮಾಡುವ ಕುರಿತ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.

ಐಎಸ್‌ಎಸ್‌ನಲ್ಲಿ ಒಂಬತ್ತು ತಿಂಗಳು ಕಳೆದು ಭೂಮಿಗೆ ಮರಳಿದ ಬಳಿಕ ಸುನಿತಾ ಮತ್ತು ಸಹೋದ್ಯೋಗಿ ಬುಚ್‌ ವಿಲ್ಮೋರ್‌ ಅವರು ಇದೇ ಮೊದಲ ಬಾರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

'ಭಾರತದ ನೋಟ ನಮಗೆ ವಿಸ್ಮಯ ಉಂಟುಮಾಡುತ್ತದೆ. ರಾತ್ರಿಯಲ್ಲಿ ದೊಡ್ಡ ನಗರಗಳು ಮತ್ತು ಸಣ್ಣ ಪಟ್ಟಣಗಳು ವಿದ್ಯುತ್‌ದೀಪಗಳಿಂದ ಕಂಗೊಳಿಸುವುದನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಹಗಲಿನಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಸೌಂದರ್ಯವನ್ನು ಸವಿಯಬಹುದು. ಐಎಸ್‌ಎಸ್‌ ಪ್ರತಿಬಾರಿಯೂ ಭಾರತದ ಮೇಲಿನಿಂದ ಸಾಗುವಾಗ, ಬುಚ್‌ ಅವರು ಹಿಮಾಲಯದ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದಾರೆ' ಎಂದು ಹೇಳಿದರು.

'ಮುಂದೊಂದು ದಿನ ನನ್ನ ತಂದೆಯ ತವರು ದೇಶಕ್ಕೆ (ಭಾರತ) ಖಂಡಿತವಾಗಿಯೂ ಭೇಟಿ ನೀಡುತ್ತೇನೆ. ನಾವು ನಮ್ಮ ಅನುಭವಗಳನ್ನು ಭಾರತದಲ್ಲಿ ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಬಹುದು' ಎಂದಿದ್ದಾರೆ. ಸುನಿತಾ ಅವರ ತಂದೆ ದೀಪಕ್‌ ಪಾಂಡ್ಯ ಅವರು ಗುಜರಾತ್‌ನವರಾಗಿದ್ದು, 1958ರಲ್ಲಿ ಅಮೆರಿಕಕ್ಕೆ ಬಂದು ನೆಲಸಿದ್ದಾರೆ.

ಭಾರತಕ್ಕೆ ಭೇಟಿ ನೀಡುವಂತೆ ಸುನಿತಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಈಚೆಗೆ ಆಹ್ವಾನ ನೀಡಿದ್ದರು. 'ಐಎಸ್‌ಎಸ್‌ನಿಂದ ಭೂಮಿಗೆ ಮರಳಿದ ನಂತರ ಭಾರತದಲ್ಲಿ ನಿಮ್ಮನ್ನು ಕಾಣಲು ದೇಶದ ಜನರು ಉತ್ಸುಕರಾಗಿದ್ದಾರೆ' ಎಂದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries