ನವದೆಹಲಿ: 'ಇಂಡಿಯಾಸ್ ಗಾಟ್ ಲೇಟೆಂಟ್' ಹಾಸ್ಯ ಕಾರ್ಯಕ್ರಮ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಸಭ್ಯತೆಯನ್ನು ಕಾಯ್ದುಕೊಳ್ಳುತ್ತೇನೆ ಎಂದು ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟೀಶ್ವರ್ ಸಿಂಗ್ ನೇತೃತ್ವದ ಪೀಠದ ಎದುರು ರಣವೀರ್ ಅಲಹಾಬಾದಿಯಾ ಅವರ ಪರ ವಕೀಲ ಅಭಿನವ್ ಚಂದ್ರಚೂಡ್ ಅವರು ವಾದ ಮಂಡಿಸಿದ್ದಾರೆ. ಜತೆಗೆ, ನಮ್ಮ ಕಕ್ಷಿದಾರರು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಲಹಾಬಾದಿಯಾ ಅವರು ಬೇರೆ ಬೇರೆ ಜನರನ್ನು ಸಂದರ್ಶಿಸಲು ವಿದೇಶಕ್ಕೆ ಪ್ರಯಾಣಿಸಬೇಕಾಗುತ್ತದೆ. ಜತೆಗೆ, ಅವರೊಂದಿಗೆ ಸಭೆಗಳನ್ನು ನಡೆಸಬೇಕಾಗಿತ್ತು. ಹಾಗಾಗಿ ಪಾಸ್‌ಪೋರ್ಟ್ ವಶಕ್ಕೆ ಕೊಡುವ ಷರತ್ತನ್ನು ಸಡಲಿಸುವಂತೆ ಚಂದ್ರಚೂಡ್ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ಅಲಹಾಬಾದಿಯಾ ಅವರು ವಿದೇಶಕ್ಕೆ ಹೋದರೆ ತನಿಖೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ನ್ಯಾಯಪೀಠವು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ಪ್ರಕರಣದ ತನಿಖೆ ಎರಡು ವಾರಗಳಲ್ಲಿ ಮುಗಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸುದೀರ್ಘ ವಾದ-ಪ್ರತಿವಾದ ಅಲಿಸಿದ ನ್ಯಾಯಪೀಠವು, ಎರಡು ವಾರಗಳ ನಂತರ ಅಲಹಾಬಾದಿಯಾ ಅವರ ಪಾಸ್‌ಪೋರ್ಟ್ ನೀಡಬೇಕೆಂಬ ಮನವಿಯನ್ನು ಪರಿಗಣಿಸುವುದಾಗಿ ಹೇಳಿದೆ.
ಅಲಹಾಬಾದಿಯಾ ಅವರು, 'ಇಂಡಿಯಾಸ್ ಗಾಟ್ ಲೇಟೆಂಟ್' ಕಾರ್ಯಕ್ರಮದಲ್ಲಿ ತಂದೆ-ತಾಯಿ ಮತ್ತು ಲೈಂಗಿಕತೆ ವಿಚಾರವಾಗಿ ಆಡಿರುವ ಮಾತುಗಳು ಭಾರಿ ವಿವಾದ ಸೃಷ್ಟಿಸಿದ್ದವು. ಈ ಸಂಬಂಧ, ಅಲಹಾಬಾದಿಯಾ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.




