ಕಾಸರಗೋಡು: ಭಾರತದ ಸಂವಿಧಾನಶಿಲ್ಪಿ, ರಾಷ್ಟ್ರ ನವೋತ್ಥಾನದ ಹರಿಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿರುವುದಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ.
ಅವರು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಕಾಸರಗೋಡಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದ ಎಡ-ಬಲ ರಾಜಕೀಯ ರಂಗಗಳು ಡಾ. ಅಂಬೇಡ್ಕರ್ ಮೇಲೆ ತೋರುತ್ತಾ ಬಂದಿರುವ ಕಪಟ ಪ್ರೇಮ ಇಂದು ಅನಾವರಣಗೊಂಡಿದೆ. ಈ ಹಿಂದೆ ಅಂಬೇಡ್ಕರ್ ಅವರಿಗೆ ದೇಶದ ಪರಮೋನ್ನತ ಪ್ರಶಸ್ತಿ ಭಾರತ ರತ್ನ ನಿಷೇಧಿಸಿದ ಕಾಂಗ್ರೆಸ್ಸಿಗರು ಈಗ ಅಂಬೇಡ್ಕರ್ ಮೇಲೆ ಕಪಟ ಪ್ರೀತಿ ತೋರಿಸುತ್ತಿರುವುದು ವಿಷಾದನೀಯ.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ರಾಜಕೀಯ ಲಾಭಕ್ಕಾಗಿ ಸ್ತುತಿಸುವ ಎಡ, ಬಲರಂಗಗಳು ಕಾಸರಗೋಡಿನಲ್ಲಿ ಅಂಬೇಡ್ಕರ್ ಸ್ಮರಣೆಗಾಗಿ ಏನನ್ನೂ ಮಾಡಿಲ್ಲ. ಬಿಜೆಪಿಯು ತನ್ನ ಕಾರ್ಯಕರ್ತರಿಂದ ದೇಣಿಗೆ ಎತ್ತಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಗೌರವ ಸೂಚಿಸಲಿರುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಬೇಬಿ ಸುನಗರ್ "ಡಾ. ಬಿ.ಆರ್ ಅಂಬೇಡ್ಕರ್-ಕಾಂಗ್ರೆಸ್ ಸರ್ಕಾರದ ಅವಗಣನೆಯೂ, ನರೇಂದ್ರ ಮೋದಿ ಸರ್ಕಾರದ ಪರಿಗಣನೆಯೂ'" ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎ.ಕೆ.ಕಯ್ಯಾರ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷರಾದ ಮಣಿಕಂಠ ರೈ, ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಪಿ.ಆರ್.ಸುನಿಲ್, ಕಾರ್ಯದರ್ಶಿ ಸಂಜೀವ ಪುಳ್ಕೂರು, ಪುಷ್ಪಾ ಗೋಪಾಲನ್, ಪ್ರಮೀಳ ಮಜಲ್, ಅಶ್ವಿನಿ ಕೆ.ಎಂ, ವೀಣಾ ಕುಮಾರಿ, ಮಧೂರು ಗ್ರಾ.ಪಂ.ಅಧ್ಯಕ್ಷ ಕೆ. ಗೋಪಾಲಕೃಷ್ಣ, ರಾಮಪ್ಪ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ವಿಚಾರಗೋಷ್ಠಿಯನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಉದ್ಘಾಟಿಸಿದರು.





