ಕಾಸರಗೋಡು: ಪಶ್ಚಿಮ ಆಫ್ರಿಕಾದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ ಕಾಸರಗೋಡು ನಿವಾಸಿ ಸೇರಿದಂತೆ ಎಲ್ಲಾ ಹತ್ತು ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಸರಗೋಡು ಪನಯಾಲ್ ಅಂಬಂಗಾಡ್ ನಿವಾಸಿ ರಜೀಂದ್ರನ್‍ಭಾರ್ಗವನ್ ಸೇರಿದಂತೆ ಹತ್ತು ಮಂದಿ ಒಳಗೊಂಡಿದ್ದ'ಬಿ2 ರಿವರ್'ಹೆಸರಿನ ಹಡಗನ್ನು ಮಾ. 17ರಂದು ಪಶ್ಚಿಮ ಆಪ್ರಿಕಾದ ರೋಮಾ ಬಂದರಿಗೆ ತೆರಳುವ ಹಾದಿ ಮಧ್ಯೆ ಕಡಲ್ಗಳ್ಳರು ಅಪಹರಿಸಿ ಅದರಲ್ಲಿದ್ದ ಸಿಬ್ಬಂದಿಯನ್ನು ಒತ್ತೆಸೆರೆಯಲ್ಲಿರಿಸಿದ್ದರು. ಸುದೀರ್ಘ ಮಾತುಕತೆಯೊಂದಿಗೆ 28ದಿವಸಗಳ ನಂತರ ಒತ್ತೆಯಾಳಾಗಿರಿಸಿಕೊಂಡಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಗೊಂಡ ರಜೀಂದ್ರನ್ ಸೇರಿದಂತೆ ಹತ್ತು ಮಂದಿಯ ತಂಡ ಮುಂಬೈ ತಲುಪಲಿರುವುದಾಗಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮಾಹಿತಿ ನೀಡಿದ್ದಾರೆ. ಕಾಸರಗೋಡು ನಿವಾಸಿ ರಜೀಂದ್ರನ್, ಅವರ ಮನೆಯವರೊಂದಿಗೂ ಸಂಪರ್ಕದಲ್ಲಿದ್ದು, ಶೀಘ್ರ ಊರಿಗೆ ಬಂದು ಸೇರುವುದಾಗಿ ತಿಳಿಸಿದ್ದಾರೆ.
ರಜೀಂದ್ರನ್ ಜತೆಗೆ ತಮಿಳ್ನಾಡು ನಿವಾಸಿ ಪ್ರದೀಪ್‍ಮುರುಗನ್, ಸತೀಶ್‍ಕುಮಾರ್‍ಸೆಲ್ವರಾಜ್, ಕೇರಳದ ಆಸಿಫ್‍ಆಲಿ, ಬಿಹಾರ್ ಸಂದೀಪ್‍ಕುಮಾರ್ ಸಿಂಗ್, ಮಹಾರಾಷ್ಟ್ರದ ಸಮೀರ್ ಜಾವೆದ್ ಹಾಗೂ ಸೋಲ್ಕರ್ ರಿಹಾನ್ ಬಬೀರ್ ಅಲ್ಲದೆ ಮೂರು ಮಂದಿ ವಿದೇಶಿಯರು ಒಳಗೊಂಡಿದ್ದಾರೆ. ಕಡಲ್ಗಳ್ಳರು ಅಪಹರಿಸಿದ ಪ್ರಕರಣ ಇದಾಗಿರುವುದರಿಂದ ಡೈರೆಕ್ಟರ್ ಜನರಲ್ ಆಫ್ ಫಿಶಿಂಗ್ ಕಚೇರಿಯಲ್ಲಿ ಎಲ್ಲಾ ಹತ್ತು ಮಂದಿಯನ್ನು ಹಾಜರುಪಡಿಸಿದ ನಂತರ ಅವರ ಊರಿಗೆ ಕಳುಹಿಸಿಕೊಡಲಾಗುವುದು ಎಂದು ಹಡಗು ಕಂಪೆನಿ ಅಧಿಕಾರಿಗಳು ಮನೆಯವರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.




