ನವದೆಹಲಿ: ಮೈಲಿಗಲ್ಲು ಎಂಬಂತಹ ತೀರ್ಪೊಂದನ್ನು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ರಾಜ್ಯ ವಿಧಾನ ಮಂಡಲ ಅಂಗೀಕಾರ ನೀಡಿರುವ ಮಸೂದೆಯ ವಿಚಾರವಾಗಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಸಮಯಮಿತಿ ನಿಗದಿ ಮಾಡಿದೆ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು 10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ತಡೆಹಿಡಿದು ಇರಿಸಿಕೊಂಡಿದ್ದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಸಿಕ್ಕ ದೊಡ್ಡ ಜಯ ಎಂದು ವ್ಯಾಖ್ಯಾನಿಸಲಾಗಿದೆ.
'10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ತಡೆಹಿಡಿದ ರಾಜ್ಯಪಾಲರ ಕ್ರಮವು ಅಕ್ರಮ, ಮನಸೋಇಚ್ಛೆ ತೀರ್ಮಾನ. ಹೀಗಾಗಿ, ಆ ಕ್ರಮವನ್ನು ಅಸಿಂಧುಗೊಳಿಸಲಾಗಿದೆ' ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
'10 ಮಸೂದೆಗಳು ರಾಜ್ಯಪಾಲರಿಗೆ ಸಲ್ಲಿಕೆಯಾದ ದಿನದಿಂದಲೇ ಅವರ ಅಂಕಿತ ಪಡೆದಿವೆ ಎಂದು ಭಾವಿಸತಕ್ಕದ್ದು' ಎಂದು ಪೀಠವು ಸಾರಿದೆ.
ಸಂವಿಧಾನದ 142ನೆಯ ವಿಧಿಯ ಅಡಿಯಲ್ಲಿ ತನಗೆ ಇರುವ ಅಸಾಮಾನ್ಯ ಅಧಿಕಾರವನ್ನು ಬಳಸಿಕೊಂಡಿರುವ ಸುಪ್ರೀಂ ಕೋರ್ಟ್, ತಮಿಳುನಾಡಿನ ರಾಜ್ಯಪಾಲರಿಗೆ ಮರುಸಲ್ಲಿಕೆಯಾಗಿದ್ದ ಮಸೂದೆಗಳು ಅಂಕಿತ ಪಡೆದಿವೆ ಎಂದು ಭಾವಿಸಬೇಕು ಎಂದು ಸಾರಿದೆ.
ವಿಧಾನ ಮಂಡಲದ ತೀರ್ಮಾನಕ್ಕೆ ಅಡ್ಡಿ ಸೃಷ್ಟಿಸಬಾರದು, ಜನರ ಇಚ್ಛೆಗೆ ಅಡ್ಡಿ ಉಂಟುಮಾಡಬಾರದು ಎಂಬ ಪ್ರಜ್ಞೆ ರಾಜ್ಯಪಾಲರಿಗೆ ಇರಬೇಕು ಎಂದು ಪೀಠವು ಕಿವಿಮಾತು ಹೇಳಿದೆ.
'ಪ್ರಜಾತಾಂತ್ರಿಕ ಅಭಿವ್ಯಕ್ತಿಯ ಮೂಲಕ ಜನರಿಂದ ಆಯ್ಕೆಯಾಗಿರುವ ವಿಧಾನ ಮಂಡಲದ ಸದಸ್ಯರು ರಾಜ್ಯದ ಜನರ ಒಳಿತನ್ನು ಖಾತರಿಪಡಿಸುವ ವಿಚಾರವಾಗಿ ಹೆಚ್ಚು ಅರಿವು ಹೊಂದಿರುತ್ತಾರೆ' ಎಂದು ಅದು ಬಣ್ಣಿಸಿದೆ.
ಸಂವಿಧಾನದ 200ನೆಯ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ವಿವೇಚನಾ ಅಧಿಕಾರ ಇಲ್ಲ. ಅವರು ರಾಜ್ಯದ ಮಂತ್ರಿ ಪರಿಷತ್ತಿನ ಸಲಹೆ ಮತ್ತು ನೆರವಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೂಡ ಕೋರ್ಟ್ ಸ್ಪಷ್ಟಪಡಿಸಿದೆ.
ತಮಗೆ ಸಲ್ಲಿಸಲಾದ ಮಸೂದೆಗೆ ಅಂಕಿತ ಹಾಕುವ, ಅಂಕಿತವನ್ನು ತಡೆಹಿಡಿಯುವ ಅಥವಾ ಅದನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಇರಿಸಿಕೊಳ್ಳುವ ಅಧಿಕಾರವನ್ನು 200ನೆಯ ವಿಧಿಯು ರಾಜ್ಯಪಾಲರಿಗೆ ನೀಡುತ್ತದೆ.
ರಾಜ್ಯಪಾಲರು ಮಸೂದೆಗಳ ವಿಚಾರವಾಗಿ ತೀರ್ಮಾನವನ್ನೇ ತೆಗೆದುಕೊಳ್ಳದೆ, 'ಪ್ರಶ್ನಾತೀತವಾದ ಪರಮಾಧಿಕಾರ'ವನ್ನು ಹೊಂದಲು ಅವಕಾಶ ಇಲ್ಲ. ವಿಧಾನಸಭೆಯು ಅಂಗೀಕಾರ ನೀಡಿದ ಮಸೂದೆಯ ವಿಚಾರವಾಗಿ ರಾಜ್ಯಪಾಲರು ಯಾವುದೇ ಕ್ರಮ ಕೈಗೊಳ್ಳದೆ ಅದನ್ನು 'ಕಾಗದದ ತುಣುಕನ್ನಾಗಿ' ಮತ್ತು 'ಮಾಂಸವಿಲ್ಲದೆ ಅಸ್ಥಿಪಂಜರವನ್ನಾಗಿ' ಮಾಡಿದ್ದರು ಎಂದು ಪೀಠವು ಹೇಳಿದೆ.
ರಾಜ್ಯಪಾಲ ರವಿ ಅವರು ಕೆಲವು ಮಸೂದೆಗಳಿಗೆ ಅಂಕಿತ ಹಾಕುವುದನ್ನು ವಿಳಂಬ ಮಾಡಿದ ಕಾರಣದಿಂದಾಗಿ ತಮಿಳುನಾಡು ಸರ್ಕಾರವು 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2020ರಲ್ಲಿ ರಾಜ್ಯಪಾಲರಿಗೆ ಕಳುಹಿಸಿದ ಒಂದು ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳು ಅವರ ಬಳಿ ಬಾಕಿ ಇವೆ ಎಂದು ರಾಜ್ಯ ಸರ್ಕಾರವು ಉಲ್ಲೇಖಿಸಿತ್ತು.
ರಾಜ್ಯಪಾಲರಿಗೆ ಮಸೂದೆಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ರೀತಿ ಮಾರ್ಗದರ್ಶನ ನೀಡಿರುವುದು ಇದೇ ಮೊದಲು.




