ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆಯ(ಎಫ್‌ಐಐ) ನಿರಂತರ ಒಳಹರಿವು ಮತ್ತು ಬ್ಲೂಚಿಪ್ ಬ್ಯಾಂಕ್ ಷೇರುಗಳ ಖರೀದಿ ಭರಾಟೆ ಹಿನ್ನೆಲೆಯಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 319.89 ಅಂಶಗಳಷ್ಟು ಏರಿಕೆಯಾಗಿ 79,728.39ಕ್ಕೆ ತಲುಪಿತ್ತು.
ಎನ್‌ಎಸ್‌ಇ ನಿಫ್ಟಿ 76.1 ಅಂಶಗಳಷ್ಟು ಏರಿಕೆಯಾಗಿ 24,201.65ಕ್ಕೆ ತಲುಪಿತ್ತು.
ಸೆನ್ಸೆಕ್ಸ್ ಸಂಸ್ಥೆಗಳಲ್ಲಿ ಎಟರ್ನಲ್, ಟಾಟಾ ಸ್ಟೀಲ್, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಲಾಭ ಗಳಿಸಿವೆ.
ಇಂಡಸ್‌ಇಂಡ್ ಬ್ಯಾಂಕ್, ಇನ್ಫೊಸಿಸ್, ಪವರ್ ಗ್ರಿಡ್ ಮತ್ತು ಏಷ್ಯನ್ ಪೇಂಟ್ಸ್ ಹಿಂದುಳಿದಿದ್ದವು.
ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಸೋಮವಾರ ₹1,970.17 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಸೂಚ್ಯಂಕ ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಏರಿಕೆ ದಾಖಲಿಸಿದ್ದವು. ಟೋಕಿಯೊದ ನಿಕ್ಕಿ 225 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಇಳಿಕೆ ದಾಖಲಿಸಿವೆ.
ಸೋಮವಾರ ಅಮೆರಿಕ ಮಾರುಕಟ್ಟೆಗಳು ಗಮನಾರ್ಹವಾಗಿ ಕುಸಿತ ಕಂಡಿದ್ದವು. ನಾಸ್ಡಾಕ್ ಕಾಂಪೋಸಿಟ್ ಶೇ 2.55, ಡೌ ಜೋನ್ಸ್ ಇಂಡಸ್ಟ್ರಿಯಲ್ ಶೇ 2.48 ಮತ್ತು ಎಸ್ ಅಂಡ್ ಪಿ 500 ಶೇ 2.36ರಷ್ಟು ಕುಸಿತ ದಾಖಲಿಸಿದೆ.




