ಕಾಸರಗೋಡು: ಪುತ್ತೂರಿನಿಂದ ಕಾಸರಗೋಡಿಗೆ ಸಂಚಾರ ನಡೆಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲವೊಂದು ಬಸ್‍ಗಳು ಸಂಚಾರ ಮೊಟಕುಗೊಳಿಸುತ್ತಿರುವುದು ಈ ಪ್ರದೇಶದ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತಿದೆ. ಸ್ತ್ರೀ ಶಕ್ತಿ ಯೋಜನೆಗಾಗಿ ಕೆಲವೊಂದು ಬಸ್‍ಗಳ ಸಂಚಾರ ರದ್ದುಗೊಳಿಸಿ, ಇವುಗಳನ್ನು ಬೇರೆ ರೂಟ್‍ಗಳಿಗೆ ಅಳವಡಿಸುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ.
ಪುತ್ತೂರಿನಿಂದ ಬೆಳಗ್ಗೆ 7.15ಕ್ಕೆ ಹೊರಟು ಪೆರ್ಲ-ಬದಿಯಡ್ಕ ಹಾದಿಯಗಿ ಕಾಸರಗೋಡು ತಲುಪುತ್ತಿರುವ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿ ಕೆಲವು ದಿವಸಗಳೇ ಕಳೆದಿದ್ದು, ಇದರಿಂದ ಬೆಳಗ್ಗೆ ಕಾಸರಗೋಡಿನ ವಿವಿಧ ಕಚೇರಿ, ಆಸ್ಪತ್ರೆಗಳಿಗೆ ತಲುಪುವ ಸಿಬ್ಬಂದಿಗೆ ಸಮಸ್ಯೆ ಎದುರಾಗಿದೆ. ಸಂಜೆಯ ವೇಳೆಗೂ ಇದೇ ಸಮಸ್ಯೆ ಎದುರಾಗುತ್ತಿದೆ. ಇನ್ನು ಬಿಸಿ ರೋಡ್ ಡಿಪೋದಿಂದ ಅಗಮಿಸುವ ಕೆಲವೊಂದು ಬಸ್‍ಗಳೂ ಸಂಚಾರ ಸ್ಥಗಿತಗೊಳಿಸಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಇದೇ ಬಸ್‍ಗಳಿಗಾಗಿ ಪ್ರಯಾಣಿಕರು ಕಾದುನಿಲ್ಲುತ್ತಿದ್ದು, ಸಂಚಾರ ಸ್ಥಗಿತಗೊಳಿಸಿರುವುದರಿಂದ ಕಚೇರಿ ಹಾಗೂ ಇತರ ಕೆಲಸದ ಸ್ಥಳಗಳಿಗೆ ನಿಗದಿತ ಸಮಯಕ್ಕೆ ತಲುಪಲಾಗದೆ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವೊಂದು ಖಾಸಗಿ ಬಸ್‍ಗಳಿದ್ದರೂ, ತುರ್ತಾಗಿ ಕಚೇರಿ, ಆಸ್ಪತ್ರೆ ಹಾಗೂ ಇತರ ಸ್ಥಳಗಳಿಗೆ ತಲುಪುವವರು ಕೆಎಸ್ಸಾರ್ಟಿಸಯನ್ನೇ ಆಶ್ರಯಿಸುತ್ತಿದ್ದು, ರದ್ದುಗೊಳಿಸಿರುವ ಬಸ್ ಸಂಚಾರ ಪುನ:ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಆದಾಯದ ಕೊರತೆಯಿರುವ ಕೆಲವೊಂದು ರೂಟ್‍ಗಳಲ್ಲಿನ ಬಸ್ ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಈ ಬಸ್‍ಗಳನ್ನು ಮರುಸ್ಥಾಪಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.





