ಕಾಸರಗೋಡು: ಕೇರಳಾದ್ಯಂತ ವಿಷು ಹಬ್ಬ(ಸೌರಮಾನ ಯುಗಾದಿ)ವನ್ನು ಇಂದು(ಏ. 14) ಆಚರಿಸಲಾಗುತ್ತಿದೆ. ಸೂರ್ಯನು ಮೇಷ ರಾಶಿಯಿಂದ ಸಂಚಾರ ಆರಂಭಿಸಿ ಮೀನ ರಾಶಿಯಲ್ಲಿ ಕೊನೆಗೊಳಿಸುತ್ತಿದ್ದು, ಸೌರಮಾನ ಯುಗಾದಿಯನ್ನು ಹೊಸ ವರ್ಷವನ್ನಾಗಿ ಆಚರಿಸುವುದು ವಾಡಿಕೆ. ಕೇರಳ, ತಮಿಳ್ನಾಡು ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ವಿಷು ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸುತ್ತಾರೆ.
ಮನೆಗಳಲ್ಲಿ ವಿಷು ಹಬ್ಬ ಆಚರಿಸುವುದರ ಜತೆಗೆ ದೇವಾಲಯ, ದೈವಸ್ಥಾನ, ತರವಾಡು ಮನೆಗಳಲ್ಲಿ ವಿಷು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ ಸೇರಿದಂತೆ ಕೇರಳದ ನಾನಾ ದೇಗುಲಗಳಲ್ಲಿ ವಿಷು ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿಷು ಹಬ್ಬದ ಹಿಂದಿನ ದಿನ ರಾತ್ರಿ ಸುವಸ್ತುಗಳೊಂದಿಗೆ ವಿಷುಕಣಿ ವ್ಯವಸ್ಥೆಗೊಳಿಸಿ, ವಿಷು ದಿನದಂದು ಬೆಳಗಿನಜಾವ ವಿಷು ಕಣಿ ದರ್ಶನ ಮಾಡುವುದು ವಾಡಿಕೆಯಾಗಿದೆ.
ಕೇರಳದಲ್ಲಿ ವಿಷುವಿಗೆ ಕಣಿ ಇರಿಸುವ ಸಂಪ್ರದಾಯ ಪುರತನ ಕಾಲದಿಂದಲೇ ನಡೆದಬರುತ್ತಿದೆ. ವಿಷು ಕಣಿಗಾಗಿ ಬಳಸುವ ಕೊನ್ನೆ ಹೂವು ನಾಡಿನೆಲ್ಲೆಡೆ ವಿಷು ಹಬ್ಬವನ್ನು ಸ್ವಾಗತಿಸುವ ರೀತಿಯಲ್ಲಿ ಅರಳಿ ನಿಂತಿದೆ. ಫೆಬ್ರವರಿ ತಿಂಗಳಲ್ಲೇ ಕೊನ್ನೆ(ಕಕ್ಕೆ ಮರ) ಮರದಲ್ಲಿ ಹೂ ಬಿಡಲಾರಂಭಿಸುತ್ತದೆ. ಭೂಮಿಯ ಅಂತರ್ಜಲ ಮಟ್ಟ ಕುಸಿದು ತಾಪಮಾನ ಏರಿಕೆಯಾಗುತ್ತಿದ್ದಂತೆ ಈ ಮರ ಎಲೆ ಉದುರಿಸಿ ಹೂ ಬಿಡಲಾರಂಭಿಸುತ್ತವೆ. ಕೊನ್ನೆ ವರ್ಷಕ್ಕೊಮ್ಮೆಯೇ ಹೂ ಬಿಡುವುದು ರೂಢಿ. ಹಲವು ದಿವಸಗಳ ವರೆಗೂ ಅರಳಿನಿಂತು, ಸೌಂದರ್ಯ ನೀಡಿ, ಬಾಡದೇ ಕಣ್ಮನ ಸೆಳೆಯುವ ಈ ಹೊನ್ನಿನ ಬಣ್ಣದ ಪುಷ್ಪ ಧಾರ್ಮಿಕ-ಸಾಂಸ್ಕøತಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಭಾರತೀಯ ಮೂಲದ ಪ್ರಾಚೀನ ಔಷಧ ವೃಕ್ಷವಾದ ಕೊನ್ನೆ ಮರವನ್ನು ಯಾರೂ ಹೂವಿಗಾಗಿ ಬೆಳೆಸುತ್ತಿಲ್ಲ. ಆದರೆ ವರ್ಷಕ್ಕೊಮ್ಮೆ ವಿಷು ಹಬ್ಬ ಬಂದಾಗ ಕೇರಳ ನಾಡಲ್ಲಿ ಕೊನ್ನೆ ಹೂವು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತದೆ.
ವಿಷುಕಣಿ(ಸಂಗ್ರಹ ಚಿತ್ರ)





