ಕಾಸರಗೋಡು: ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಾದಕ ವಸ್ತುವಿರುದ್ಧ ಹೋರಾಟದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಲಕ್ಷ್ಯ ಹಾಗೂ ಕಪಟತನ ತೋರುತ್ತಿರುವುದಾಗಿ ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ.
ಅವರು ಕರಾವಳಿ ಸಂರಕ್ಷಣಾ ಸಂದೇಶ ಯಾತ್ರೆಯ ಸಮಿತಿ ರಚನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು. ಮಾದಕ ವಸ್ತುಗಳ ವಿರುದ್ಧ ಹೋರಾಟ ಬಲಪಡಿಸುವುದಾಗಿ ತಿಳಿಸಿದ್ದ ಮುಖ್ಯಮಂತ್ರಿ, ಒಂದನೇ ತಾರೀಕಿನಂದು ಜಾರಿಯಲ್ಲಿರುವ ಡ್ರೈಡೇ ದಿನದಂದು ಮದ್ಯ ವಿತರಣೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸುವ ಮೂಲಕ ಇಬ್ಬಗೆ ಧೋರಣೆ ತಳೆದಿರುವುದು ಖಂಡನೀಯ. ಎಸ್‍ಎಫ್‍ಐ ಸಂಘಟನೆ ರಾಜ್ಯದಲ್ಲಿ ಮಾದಕ ದ್ರವ್ಯದ ಕೊಂಡಿಗಳಾಗಿ ಬದಲಾಗುತ್ತಿದೆ ಎಂದು ತಿಳಿಸಿದರು.

