ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶನಿವಾರ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದುವರೆಗೆ ಯಾವುದೇ ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.
ಅಫ್ಗಾನಿಸ್ತಾನ-ತಜಿಕಿಸ್ತಾನ ಗಡಿ ಪ್ರದೇಶದ ಬಳಿ 94 ಕಿಲೋಮೀಟರ್ ಆಳದಲ್ಲಿ ಕೇಂದ್ರ ಬಿಂದು ಇದೆ.
ಬೆಳಿಗ್ಗೆ 11:47 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.
ಇಸ್ಲಾಮಾಬಾದ್, ಲಾಹೋರ್, ಪೇಶಾವರ, ರಾವಲ್ಪಿಂಡಿ ಮತ್ತು ಖೈಬರ್ ಪಖ್ತುಂಖ್ವಾದ ವಿವಿಧ ಭಾಗಗಳು ಸೇರಿದಂತೆ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
ಖೈಬರ್ ಪಖ್ತುಂಖ್ವಾದ ಲೋವರ್ ದಿರ್, ಬಜೌರ್, ಮಲಕಂಡ್, ನೌಶೇರಾ, ದಿರ್ ಬಾಲಾ, ಶಬ್ಖಾದರ್ ಮತ್ತು ಮೊಹಮ್ಮದ್ ಪ್ರದೇಶಗಳಿಂದ ಪ್ರಬಲವಾದ ಕಂಪನಗಳು ವರದಿಯಾಗಿವೆ. ಇದು ನಿವಾಸಿಗಳಲ್ಲಿ ಭೀತಿಯನ್ನುಂಟುಮಾಡಿದೆ.
ಕಳೆದ ಶನಿವಾರ ಪಾಕಿಸ್ತಾನದ ರಾಜಧಾನಿ ಮತ್ತು ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ವಾರದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಭೂಕಂಪವಾಗಿದೆ.
2005 ರಲ್ಲಿ ಪಾಕಿಸ್ತಾನದಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿದ್ದು, 74,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.




