ಕೋಲ್ಕತ್ತ: ರಾಮನವಮಿ ಆಚರಣೆಗೆ ಪಶ್ಚಿಮ ಬಂಗಾಳ ಸಜ್ಜಾಗಿದೆ. ಭಾನುವಾರ ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ಧಾರ್ಮಿಕ ಮೆರವಣಿಗೆಗಳು ನಡೆಯುವ ಸಾಧ್ಯತೆ ಇರುವುದರಿಂದ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
'ಹಿಂದಿನ ಕೆಲ ವರ್ಷಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಗುಂಪುಗಳ ನಡುವೆ ಘರ್ಷಣೆಗಳು ನಡೆದ ಉದಾಹರಣೆಗಳಿವೆ.
ಈವರ್ಷ ಕೋಲ್ಕತ್ತದಲ್ಲಿ ಕನಿಷ್ಠ 60 ರ‍್ಯಾಲಿಗಳು ನಡೆಯಲಿವೆ. ಮುಂಜಾಗ್ರತಾ ಕ್ರಮವಾಗಿ 3,500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಡಿಸಿಪಿ ಮತ್ತು ಜಂಟಿ ಆಯುಕ್ತರು ರ‍್ಯಾಲಿಗಳ ಮೇಲುಸ್ತುವಾರಿ ವಹಿಸಲಿದ್ದಾರೆ. ಇದರೊಂದಿಗೆ ಡ್ರೋನ್ ಮತ್ತು ಸಿಸಿಟಿವಿ ಕಣ್ಗಾವಲು ಇರಲಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ರ‍್ಯಾಲಿಗಳ ನೇರ ಪ್ರಸಾರ ಇರಲಿದ್ದು, ನಿಯಂತ್ರಣ ಕೇಂದ್ರದಲ್ಲಿ ಇದರ ವೀಕ್ಷಣೆಗೆ 20 ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗಳಲ್ಲಿ ಐಪಿಎಸ್ ಅಧಿಕಾರಿಗಳು ಪರಿಸ್ಥಿತಿ ನಿರ್ವಹಿಸಲಿದ್ದಾರೆ. ಹೌರಾ, ಹೂಗ್ಲಿ, ಉತ್ತರ 24 ಪರಗಣ, ಅಸಾನ್‌ಸೊಲ್, ಪೂರಬ್ ಬರ್ಧಮಾನ್, ಮಾಲ್ದಾ, ಮುಷಿರಾಬಾದ್, ಜಲ್ಪೈಗುರಿ ಮತ್ತು ಸಿಲಿಗುರಿ ಕಟ್ಟೆಚ್ಚರ ವಹಿಸಲಾಗಿದೆ' ಎಂದು ತಿಳಿಸಿದ್ದಾರೆ.
2026ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಮನವಮಿ ಮೆರವಣಿಗೆಗೆ ಬಿಜೆಪಿ ಮತ್ತು ಇತರ ಬಲಪಂಥೀಯ ಹಿಂದೂ ಸಂಘಟನೆಗಳು ಕರೆ ನೀಡಿವೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೂಡಾ ರ‍್ಯಾಲಿ ನಡೆಸುತ್ತಿದೆ. 2022 ಹಾಗೂ 2023ರಲ್ಲಿ ಹಿಂಸಾಚಾರ ನಡೆದಿತ್ತು.
'1.5 ಕೋಟಿ ಹಿಂದೂಗಳು ಮನೆಯಿಂದ ಹೊರಬಂದು ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕನಿಷ್ಠ 2 ಸಾವಿರ ರ‍್ಯಾಲಿಗಳನ್ನು ನಡೆಸಲಾಗುವುದು' ಎಂದು ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
'ಧರ್ಮದ ಹೆಸರಿನಲ್ಲಿ ಬಿಜೆಪಿಯು ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ. ಜತೆಗೆ ಧರ್ಮಾಧಾರಿತ ವಿಭಜನೆಗೂ ಕೈಹಾಕಿದೆ. ಸರ್ಕಾರದ ವಿರುದ್ಧ ನಿರಂತರ ಆರೋಪಗಳನ್ನು ಮಾಡುವ ಮೂಲಕ ಜನರ ದಿಕ್ಕುತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ' ಎಂದು ಟಿಎಂಸಿ ವಕ್ತಾರ ಜಯಪ್ರಕಾಶ ಮಜುಮ್ದಾರ್ ಆರೋಪಿಸಿದ್ದಾರೆ.
KKR vs LSG ಪಂದ್ಯ ಏ. 6ರ ಬದಲು ಏ. 8ಕ್ಕೆ
ರಾಮನವಮಿ ಆಚರಣೆಯ ಕಾರಣದಿಂದ ಏ. 6ರಂದು ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಐಪಿಎಲ್‌ನ ಆತಿಥೇಯ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್) ಹಾಗೂ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳ ನಡುವಿನ ಪಂದ್ಯವನ್ನು ಮುಂದೂಡುವಂತೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯನ್ನು ಪೊಲೀಸ್ ಇಲಾಖೆ ಕೋರಿತ್ತು. ಆರಂಭದಲ್ಲಿ ಈ ಪಂದ್ಯ ಒಡಿಶಾದ ಗುವಾಹಟಿಗೆ ಸ್ಥಳಾಂತರಗೊಳ್ಳಲಿದೆ ಎಂದೆನ್ನಲಾಗಿತ್ತು. ಇದೀಗ ಈ ಪಂದ್ಯವನ್ನು ಏ. 8ಕ್ಕೆ ಮುಂದೂಡಲಾಗಿದೆ ಎಂದು ಐಪಿಎಲ್‌ನ ಅಧಿಕೃತ ಅಂತರ್ಜಾಲ ಪುಟದಲ್ಲಿ ಹೇಳಲಾಗಿದೆ.




