HEALTH TIPS

Pahalgam Attack: ಜಿಪ್‌ಲೈನ್‌ನಲ್ಲಿ ಪ್ರವಾಸಿಗ ಸವಾರಿ;ಸೆರೆಯಾಯ್ತು ಭಯಾನಕ ದೃಶ್ಯ

 ಅಹಮದಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಪಟ್ಟಂತೆ ಬೆಚ್ಚಿ ಬೀಳಿಸುವ ಹೊಸದೊಂದು ವಿಡಿಯೊ ಹೊರಬಂದಿದೆ.

ಪ್ರವಾಸಿಗರೊಬ್ಬರು ಜಿಪ್‌ಲೈನ್ ತಂತಿಯ ಮೇಲೆ ಸವಾರಿ ಆನಂದಿಸುತ್ತಿದ್ದ ಸಂದರ್ಭದಲ್ಲಿ ಕೆಳಗಡೆ ಉಗ್ರರು ದಾಳಿ ನಡೆಸುತ್ತಿರುವ ದೃಶ್ಯವು ವಿಡಿಯೊದಲ್ಲಿ ಸರೆಯಾಗಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.


ಗುಜರಾತ್‌ನ ಅಹಮದಾಬಾದ್‌ ಮೂಲದ ಪ್ರವಾಸಿಗ ರಿಷಿ ಭಟ್ ತಮ್ಮ ಸೆಲ್ಪಿ ಸ್ಟಿಕ್‌ನಲ್ಲಿ ಚಿತ್ರೀಕರಿಸಿದ ವಿಡಿಯೊದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.  53 ಸೆಕೆಂಡುಗಳ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬೆಚ್ಚಿ ಬಿದ್ದ ಜನರು ಕಿರುಚಾಡುತ್ತಿದ್ದಾರೆ. ಭಯೋತ್ಪಾದಕರ ಗುಂಡಿನ ಶಬ್ದ ಕೇಳಿ ಬರುತ್ತಿದೆ. ವಿಡಿಯೊದ ಕೊನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡುವುದು ಕಂಡುಬಂದಿದೆ.

ಪತ್ನಿ ಹಾಗೂ ಮಗುವಿನೊಂದಿಗೆ ರಿಷಿ ಭಟ್, ಬೈಸರನ್ ಕಣಿವೆಗೆ ಪ್ರವಾಸಕ್ಕೆ ತೆರಳಿದ್ದರು. ಜಿಪ್‌ಲೈನ್‌ ತಂತಿಯಲ್ಲಿ ಕುಳಿತು ಸವಾರಿ ಆರಂಭಿಸಿದಾಗ ಗುಂಡಿನ ದಾಳಿ ಪ್ರಾರಂಭವಾಯಿತು. ಈ ವೇಳೆ ಪತ್ನಿ ಹಾಗೂ ಮಗು ಜಿಪ್‌ಲೈನ್‌ನ ಇನ್ನೊಂದು ತುದಿಯಲ್ಲಿದ್ದರು ಎಂದು ಅವರು ವಿವರಿಸಿದ್ದಾರೆ.

ದಾಳಿಯಿಂದ ವಿಚಲಿತಗೊಂಡ ಭಟ್, ತಕ್ಷಣವೇ ಪತ್ನಿ, ಮಗುವಿನೊಂದಿಗೆ ಸಮೀಪದಲ್ಲೇ ಅಡಗಿ ಕುಳಿತಿರುವುದಾಗಿ ತಿಳಿಸಿದ್ದಾರೆ. ಸುಮಾರು 10 ನಿಮಿಷಗಳ ಬಳಿಕ ಗುಂಡಿನ ಶಬ್ದ ಕಡಿಮೆಯಾದಾಗ ಅಲ್ಲಿಂದ ಮತ್ತೆ ಸುರಕ್ಷಿತ ಜಾಗಕ್ಕೆ ತೆರಳಿರುವುದಾಗಿ ತಿಳಿಸಿದ್ದಾರೆ.

'ಕೆಲವು ಭಯೋತ್ಪಾದಕರು ಜನರ ಧರ್ಮದ ಹೆಸರು ಕೇಳಿ ಗುಂಡು ಹೊಡೆಯುತ್ತಿದ್ದರು. ಇನ್ನುಳಿದವರು ಅಡಗಿಕೊಂಡು ಗುಂಡು ಹೊಡೆಯುತ್ತಿದ್ದರು. ಗುಂಡಿನ ದಾಳಿ ಕೇಳಿಸಿದರೆ ನಾಲ್ಕರಿಂದ ಐವರು ಭಯೋತ್ಪಾದಕರು ಇದ್ದಿರಬಹುದು. ನೆಲದಲ್ಲಿ ಇಬ್ಬರು ಇದ್ದರು. ಅಡಗಿ ಕುಳಿತವರಲ್ಲಿ ಎಷ್ಟು ಮಂದಿ ಇದ್ದರು ಎಂದು ತಿಳಿದು ಬಂದಿಲ್ಲ' ಎಂದು ಹೇಳಿದ್ದಾರೆ.

'ನಾನು ಸೆಲ್ಫಿ ಸ್ಟಿಕ್ ತೆಗೆದುಕೊಂಡಾಗ ಆಪರೇಟರ್ ಮೂರು ಸಲ 'ಅಲ್ಲಾಹು ಆಕ್ಬರ್' ಎಂದು ಹೇಳಿದರು. ಕೆಲವೇ ಹೊತ್ತಿನಲ್ಲಿ ಗುಂಡಿನ ಶಬ್ದ ಕೇಳಿಸಿತು' ಎಂದು ಅವರು ಹೇಳಿದ್ದಾರೆ.

'ದಾಳಿ ನಡೆದ ಸಮಯದಲ್ಲಿ ಭಾರತೀಯ ಸೇನೆ ಇರಲಿಲ್ಲ. 20 ನಿಮಿಷಗಳ ಬಳಿಕ ಸೇನೆಯು ಪ್ರವಾಸಿಗರನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದಿತು' ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries