ನವದೆಹಲಿ: 'ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೈಗೊಂಡ ಕ್ರಮಗಳಿಗೆ ಅನುಸಾರವಾಗಿ ಭಾರತ-ಪಾಕ್ ಗಡಿಯಲ್ಲಿ ಎರಡು ದೇಶಗಳ ಸೈನಿಕರು ದಿನದ ಅಂತ್ಯದಲ್ಲಿ ನಡೆಸುತ್ತಿದ್ದ ಕವಾಯತು ಕಾರ್ಯಕ್ರಮವನ್ನು ನಿಲ್ಲಿಸಲಾಗುತ್ತಿದೆ' ಎಂದು ಬಿಎಸ್‌ಎಫ್ ಗುರುವಾರ ಹೇಳಿದೆ.
ಪಂಜಾಬ್‌ನ ಭಾರತ-ಪಾಕ್‌ನ ಅಟ್ಟಾರಿ, ಹುಸೈನಿವಾಲಾ ಹಾಗೂ ಸದಗಿ ಗಡಿ ಪ್ರದೇಶದಲ್ಲಿ ಪ್ರತಿದಿನವೂ ಭಾರತದ ಬಿಎಸ್‌ಎಫ್ ಹಾಗೂ ಪಾಕಿಸ್ತಾನದ ರೇಂಜರ್ಸ್‌ನವರು ಕವಾಯತು ನಡೆಸುತ್ತಿದ್ದರು. ಧ್ವಜ ಇಳಿಸುವ ಕಾರ್ಯಕ್ರಮವೂ ಪ್ರತಿನಿತ್ಯ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ನೋಡಲು ದೇಶ ವಿದೇಶಗಳ ನೂರಾರು ಪ್ರವಾಸಿಗರು ಸೇರುತ್ತಿದ್ದರು.
'ಬಹಳ ಯೋಚಿಸಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಭಾರತ-ಪಾಕಿಸ್ತಾನದ ಗಾರ್ಡ್ ಕಮಾಂಡರ್‌ಗಳ ಮಾಡುತ್ತಿದ್ದ ಹಸ್ತಲಾಘವ ಸಂಪ್ರದಾಯವನ್ನೂ ನಿಲ್ಲಿಸಲಾಗುತ್ತಿದೆ. ಈ ಗಡಿಗಳಲ್ಲಿ ಭಾರತದ ಸೈನಿಕರು ನಡೆಯುತ್ತಿರುವ ಇತರೆ ಕಾರ್ಯಕ್ರಮಗಳು ಮುಂದುವರಿಯಲಿವೆ' ಎಂದು ಬಿಎಸ್‌ಎಫ್ ಹೇಳಿದೆ.
'ಧ್ವಜ ಇಳಿಸುವ ಕಾರ್ಯಕ್ರಮ ಮುಂದುವರಿಯಲಿದೆ. ಇದಕ್ಕೆ ಸಾರ್ವಜನಿಕರು ಸಾಕ್ಷಿಯಾಗಬಹುದು' ಎಂದಿದೆ.




