ಮಾಸ್ಕೊ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಚೀನಾ ಮತ್ತು ರಷ್ಯಾ ಒಳಗೊಳ್ಳಬೇಕು ಎಂದು ಪಾಕಿಸ್ತಾನ ಹೇಳಿದೆ.
ಇದೇ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆಂಟ್ ಫ್ರಂಟ್(ಟಿಆರ್‌ಎಫ್) ದಾಳಿಯ ಹೊಣೆ ಹೊತ್ತುಕೊಂಡಿತ್ತು.
ದಾಳಿ ಕುರಿತಂತೆ ಭಾನುವಾರ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ದಾಳಿಯ ದುಷ್ಕರ್ಮಿಗಳು ಮತ್ತು ಪಿತೂರಿಗಾರರಿಗೆ ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ರಷ್ಯಾ ಸರ್ಕಾರ ನಡೆಸುತ್ತಿರುವ ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಈ ಬಿಕ್ಕಟ್ಟಿನಲ್ಲಿ ರಷ್ಯಾ ಅಥವಾ ಚೀನಾ ಅಥವಾ ಪಾಶ್ಚಿಮಾತ್ಯ ದೇಶಗಳು ಸಹ ಸಕಾರಾತ್ಮಕ ಪಾತ್ರ ವಹಿಸಬಹುದು. ತನಿಖಾ ತಂಡವನ್ನು ರಚಿಸಿ ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಸತ್ಯ ಹೇಳುತ್ತಿದ್ದಾರೆಯೇ ಎಂಬುದನ್ನು ತನಿಖೆ ಮೂಲಕ ಕಂಡುಹಿಡಿಯಬಹುದು ಎಂದಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಂತರರಾಷ್ಟ್ರೀಯ ತನಿಖಾ ತಂಡದ ಮೂಲಕ ತನಿಖೆಗೆ ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
'ಭಾರತದಲ್ಲಿನ ಈ ಘಟನೆಯ ಅಪರಾಧಿ ಯಾರು ಎಂದು ಕಂಡುಹಿಡಿಯೋಣ. ಕೇವಲ ಮಾತು ಅಥವಾ ಖಾಲಿ ಹೇಳಿಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನ ಭಾಗಿಯಾಗಿದೆ ಅಥವಾ ದಾಳಿಕೋರರಿಗೆ ಪಾಕಿಸ್ತಾನದಿಂದ ಬೆಂಬಲ ಸಿಕ್ಕಿದೆ ಎಂಬುದಕ್ಕೆ ಪುರಾವೆಗಳು ಇರಬೇಕು. ಈಗ ಕೇವಲ ಖಾಲಿ ಹೇಳಿಕೆಗಳನ್ನು ನೀಡಲಾಗುತ್ತಿದೆ'ಎಂದು ಖವಾಜಾ ಹೇಳಿದ್ದಾರೆ.




