ಶ್ರೀನಗರ: ಜಮ್ಮು ಕಾಶ್ಮೀರದ ಸೌಂದರ್ಯ ಸವಿಯಲೆಂದು ದೇಶದ ಹಲವೆಡೆಯಿಂದ ಬಂದ ಪ್ರವಾಸಿಗರು ಇಂದು (ಏ.22, ಮಂಗಳವಾರ) ಉಗ್ರರ ಗುಂಡಿನೇಟಿಗೆ ಬಲಿಯಾಗಿದ್ದಾರೆ. ಮಿನಿ ಸ್ವಿಜರ್ ಲ್ಯಾಂಡ್ ಎಂದೇ ಹೆಸರಾದ ಪೆಹಲ್ಗಾಮ್ ನಿಂದ ಐದಾರು ಕಿ.ಮೀ ದೂರದಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸದ ಮಜಾ ಅನುಭವಿಸುತ್ತಿದ್ದ ಪ್ರವಾಸಿಗರನ್ನು ಸುತ್ತುವರಿದ ಉಗ್ರರು ಗುಂಡೇಟು ಹಾರಿಸಿದ್ದಾರೆ.
ಘಟನೆಯಲ್ಲಿ ಕರ್ನಾಟಕದ ಒಬ್ಬರು ಸೇರಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಸುನೀಗಿದವರಲ್ಲಿ ಇಬ್ಬರು ವಿದೇಶಿಗರೂ ಸೇರಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಾವಿನ ಸಂಖ್ಯೆಯನ್ನು ಇನ್ನೂ ಖಚಿತವಾಗಿ ಹೇಳಿಲ್ಲ. ಈ ದಾಳಿಯನ್ನು “ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಾವು ನೋಡಿದ ಯಾವುದೇ ದಾಳಿಗಿಂತ ದೊಡ್ಡದಾಗಿದೆ” ಎಂದು ಹೇಳಿದ್ದಾರೆ.
ಮಧ್ಯಾಹ್ನ 2.30ರ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಂದಿನ ದಾಳಿಯಲ್ಲಿ ಐದರಿಂದ ಆರು ಭಯೋತ್ಪಾದಕರು ಭಾಗಿಯಾಗಿದ್ದಾರೆಂದು ಗುಪ್ತಚರ ಮೂಲಗಳು ಶಂಕಿಸಿವೆ. ಈ ಗುಂಪಿನಲ್ಲಿ ಪಾಕಿಸ್ತಾನಿಗಳು ಎಂದು ನಂಬಲಾದ ವಿದೇಶಿ ಭಯೋತ್ಪಾದಕರು ಸೇರಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರವಾಸಿಗರ ಮೇಲೆ ದಾಳಿ ನಡೆಸುವ ಕೆಲವೇ ದಿನಗಳ ಮೊದಲು ಕಾಶ್ಮೀರಕ್ಕೆ ನುಸುಳಿದ್ದರು. ದಾಳಿ ನಡೆಸುವ ಮೊದಲು ಆ ಪ್ರದೇಶದ ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಉಗ್ರಗಾಮಿಗಳು ದಾಳಿಗೆ ಮೊದಲು ಕೆಳಗೆ ಮಲಗಿ ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದರು ಎಂದು ಏಜೆನ್ಸಿಗಳು ಶಂಕಿಸಿವೆ. ಅದೇ ಗುಂಪು ಏಪ್ರಿಲ್ 1 ರಿಂದ 7 ರವರೆಗೆ ಪಹಲ್ಗಾಮ್‌ನ ಹಲವಾರು ಹೋಟೆಲ್‌ಗಳನ್ನು ಸಮೀಕ್ಷೆ ಮಾಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಪ್ರಧಾನಿ ಮೋದಿಗೆ ಈ ಭೀಕರ ಘಟನೆಯನ್ನು ವಿವರಿಸಲು ಭಯೋತ್ಪಾದಕರು ತನ್ನ ಜೀವವನ್ನು ಉಳಿಸಿದರು ಎಂದು ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಹೇಳಿಕೆ ನೀಡಿದ್ದಾರೆ. “ಮೂರರಿಂದ ನಾಲ್ಕು ಜನರು ನಮ್ಮ ಮೇಲೆ ದಾಳಿ ಮಾಡಿದರು. ನೀವು ಈಗಾಗಲೇ ನನ್ನ ಗಂಡನನ್ನು ಕೊಂದಿದ್ದೀರಿ. ನನ್ನನ್ನೂ ಕೊಲ್ಲುಎಂದು ಅವರಿಗೆ ಹೇಳಿದೆ. ಆಗ ಅವರಲ್ಲಿ ಒಬ್ಬ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಹೋಗಿ ಮೋದಿಗೆ ಇದನ್ನು ಹೇಳು ಎಂದ” ಎಂದು ಹೇಳಿದ್ದಾರೆ.




