ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನಂಟು ಇರುವುದಾಗಿ ಭಾರತ ಮಾಡಿರುವ ಆರೋಪಗಳನ್ನು ತಿರಸ್ಕರಿಸುವ ನಿರ್ಣಯವನ್ನು ಪಾಕಿಸ್ತಾನದ ಸೆನೆಟ್ ಶುಕ್ರವಾರ ಅಂಗೀಕರಿಸಿದೆ.
ಭಾರತ ಮಾಡಿರುವ ಆರೋಪ ಕ್ಷುಲ್ಲಕ ಮತ್ತು ಆಧಾರ ರಹಿತವಾದ ಪ್ರಯತ್ನಗಳೆಂದು ಅದು ಹೇಳಿದೆ.
ಉಪಪ್ರಧಾನಿ ಇಶಾಕ್ ದಾರ್ ನಿರ್ಣಯ ಮಂಡಿಸಿದರು. ಸಂಸತ್ತಿನ ಮೇಲ್ಮನೆಯಲ್ಲಿ ಈ ನಿರ್ಣಯವನ್ನು ಎಲ್ಲ ಪಕ್ಷಗಳು ಸಂಪೂರ್ಣ ಬೆಂಬಲಿಸಿದವು.
ಜಲ ಭಯೋತ್ಪಾದನೆ ಅಥವಾ ಮಿಲಿಟರಿ ಪ್ರಚೋದನೆ ಸೇರಿ ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪಾಕಿಸ್ತಾನವು ಸಂಪೂರ್ಣ ಸಮರ್ಥವಾಗಿದೆ ಹಾಗೂ ಸಿದ್ಧವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿಯುವ ಭಾರತದ ಘೋಷಣೆಯನ್ನು ಖಂಡಿಸಿ, ಈ ಕ್ರಮವು ಯುದ್ಧದ ಕೃತ್ಯಕ್ಕೆ ಸಮಾನವಾಗಿದೆ ಎಂದು ನಿರ್ಣಯದಲ್ಲಿ ಹೇಳಿದೆ.
ಇದಕ್ಕೂ ಮುನ್ನ, ವಿದೇಶಾಂಗ ಕಚೇರಿಯು ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ 26 ದೇಶಗಳ ರಾಜತಾಂತ್ರಿಕರಿಗೆ ವಿವರಿಸಿದೆ ಎಂದು ಉಪ ಪ್ರಧಾನಿ ಸದನಕ್ಕೆ ಮಾಹಿತಿ ನೀಡಿದರು.




