ಕಾನ್ಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂಗಳನ್ನು ಒಗ್ಗೂಡಿಸಲು ಜೀವನದುದ್ದಕ್ಕೂ ಶ್ರಮಿಸಿದರು. ಬಾಲ್ಯದಲ್ಲಿ ಸಂಕಷ್ಟಗಳನ್ನು ಎದುರಿಸಿದರೂ, ಸಾಮಾಜಿಕ ಸೌಹಾರ್ದತೆ ಕಾಪಾಡಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಬದ್ಧವಾಗಿದ್ದರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶ್ಲಾಘಿಸಿದ್ದಾರೆ.
ಕಾನ್ಪುರದ ಕಾರವಾಲೊ ನಗರದಲ್ಲಿ ಆರ್‌ಎಸ್‌ಎಸ್‌ನ ಪ್ರಾದೇಶಿಕ ಕಚೇರಿ 'ಕೇಶವ ಭವನ'ವನ್ನು ಉದ್ಘಾಟಿಸಿ ಮಾತನಾಡಿದ ಭಾಗವತ್, 'ಬಾಬಾ ಸಾಹೇಬರು ಗಂಭೀರ ಸಮಸ್ಯೆಗಳನ್ನು ಎದುರಿಸಿದ್ದರು. ಬಾಲ್ಯದಿಂದಲೂ ತಾರತಮ್ಯ, ಅಸಮಾನತೆಯನ್ನು ಅನುಭವಿಸಿದ್ದರು. ಆದಾಗ್ಯೂ, ಜೀವನದುದ್ದಕ್ಕೂ ಹಿಂದೂ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ಸಾಮಾಜಿಕ ಐಕ್ಯತೆ ಹಾಗೂ ಪ್ರಗತಿಗಾಗಿ ಅವರು ಹೊಂದಿದ್ದ ಬದ್ಧತೆಯು ಎಲ್ಲರಿಗೂ ಪ್ರೇರಣೆ ನೀಡುವಂತಹದ್ದು' ಎಂದು ಹೇಳಿದ್ದಾರೆ.
ಅಂಬೇಡ್ಕರ್ ಹಾಗೂ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡಗೇವಾರ್ ಅವರನ್ನು ಹೋಲಿಸಿ ಮಾತನಾಡಿದ ಭಾಗವತ್, ಇಬ್ಬರೂ ಮಹನೀಯರು ಸಮಾಜದ ಏಳಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಬದುಕನ್ನು ಅರ್ಪಿಸಿದರು ಎಂದಿದ್ದಾರೆ.
'ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಹೆಡಗೇವಾರ್ ಅವರು ಜೀವನದುದ್ದಕ್ಕೂ ಹಿಂದೂ ಸಮುದಾಯಕ್ಕಾಗಿ ಕೆಲಸ ಮಾಡಿದರು. ಅವರು, ಬಲಿಷ್ಠ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು' ಎಂದು ಒತ್ತಿ ಹೇಳಿದ್ದಾರೆ.
ಆರ್‌ಎಸ್‌ಎಸ್ ನೂತನ ಕಟ್ಟಡದ ಉದ್ಘಾಟನೆಯನ್ನು ಅಂಬೇಡ್ಕರ್ ಜಯಂತಿಯಂದೇ ನೆರವೇರಿಸುತ್ತಿರುವುದು ಸುಯೋಗ ಎಂದೂ ಅಭಿಪ್ರಾಯಪಟ್ಟಿದ್ದಾರೆ.




