ಹಿಸಾರ್: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯದವರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ಕಾರಕ್ಕೆ ಅಪಾಯ ಬಂದಾಗಲೆಲ್ಲ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಹೊಸಕಿ ಹಾಕಿದೆ. ಈ ಸಂಬಂಧ 1975-77ರ ತುರ್ತು ಪರಿಸ್ಥಿತಿಯನ್ನು ನೆನಪಿಸಿದ ಅವರು, ಏಕರೂಪ ನಾಗರಿಕ ಸಂಹಿತೆ ಹೊಂದುವುದು ಸಂವಿಧಾನದ ಆಶಯವಾಗಿದೆ. ನಾನು ಅದನ್ನು ಜಾತ್ಯತೀತ ನಾಗರಿಕ ಸಂಹಿತೆ ಎಂದು ಕರೆಯುತ್ತೇನೆ. ಆದರೆ, ಕಾಂಗ್ರೆಸ್ ಅದನ್ನು ಜಾರಿ ಮಾಡಿಲ್ಲ ಎಂದಿದ್ದಾರೆ.
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿರುವುದನ್ನು ಪ್ರಸ್ತಾಪಿಸಿದ ಅವರು, ಈ ದೇಶದ ಹಣೆಬರಹ ನೋಡಿ. ಸಂವಿಧಾನದ ಪ್ರತಿ ಹಿಡಿದು ಓಡಾಡುವವರು ಸಂವಿಧಾನದ ಆಶಯವಾದ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಮೀಸಲಾತಿ ಇದೆ. ಆದರೆ, ಕಾಂಗ್ರೆಸ್ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನತೆ ಬಯಸಿದ್ದರು. ಆದರೆ, ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕೀಯದ ವೈರಸ್ ಹಬ್ಬಿಸಿದೆ ಎಂದಿದ್ದಾರೆ. ಪ್ರತಿಯೊಬ್ಬ ಬಡ ವ್ಯಕ್ತಿಯು ತಲೆ ಎತ್ತಿ ಘನತೆಯಿಂದ ಜೀವಿಸಬೇಕು ಮತ್ತು ತಮ್ಮ ಕನಸು ಸಾಕಾರಗೊಳಿಸಿಕೊಳ್ಳಬೇಕೆಂದು ಅಂಬೇಡ್ಕರ್ ಬಯಸಿದ್ದರು. ಆದರೆ, ಕಾಂಗ್ರೆಸ್, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದ ಜನರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಿತ್ತು ಎಂದಿದ್ದಾರೆ.
ಅಧಿಕಾರಕ್ಕಾಗಿ ಕಾಂಗ್ರೆಸ್ ಸಂವಿಧಾನವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಮೋದಿ ದೂರಿದ್ದಾರೆ.
ಕಾಂಗ್ರೆಸ್ ಆಡಳಿತದ ದೀರ್ಘ ಅಧಿಯಲ್ಲಿ ನೀರು ಪಕ್ಷದ ನಾಯಕರ ಈಜುಕೊಳಕ್ಕೆ ಹೋಗುತ್ತಿತ್ತು. ಆದರೆ, ಹಳ್ಳಿಗಳ ನಲ್ಲಿಗಳಲ್ಲಿ ನೀರು ಬರುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಶೇ 16ರಷ್ಟು ಜನರ ಮನೆಗಳಿಗೆ ಮಾತ್ರ ನಲ್ಲಿಯಲ್ಲಿ ನೀರು ಕೊಡುವ ಸೌಲಭ್ಯ ಸಿಕ್ಕಿತ್ತು. ನಲ್ಲಿ ನೀರಿನಿಂದ ವಂಚಿತರಾದವರ ಪೈಕಿ ಹೆಚ್ಚು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ಸಮುದಾಯದವರು ಎಂದಿದ್ದಾರೆ.
ತುಳಿತಕ್ಕೊಳಗಾದ ಸಮುದಾಯಗಳ ಕಲ್ಯಾಣದ ಬಗ್ಗೆ ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದವರ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿದ್ದರು ಎಂದಿದ್ದಾರೆ.






