HEALTH TIPS

UPI ಪಾವತಿಗೆ GST ಇಲ್ಲ, ವದಂತಿಗೆ ಕಿವಿಗೊಡಬೇಡಿ: ಹಣಕಾಸು ಸಚಿವಾಲಯ

ನವದೆಹಲಿ: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಪಾವತಿ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಯಾವುದೇ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದಿಲ್ಲ. ಹಾಗಾಗಿ, ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟನೆ ನೀಡಿದೆ.

₹2 ಸಾವಿರಕ್ಕಿಂತ ಹೆಚ್ಚು ಮೌಲ್ಯದ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲು ಕೇಂದ್ರ ಮುಂದಾಗಿದೆ. ಶೀಘ್ರವೇ, ಇದು ಕಾರ್ಯರೂಪಕ್ಕೆ ಬರಲಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಇದರಿಂದ ಗ್ರಾಹಕರು ಆತಂಕಗೊಂಡಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವಾಲಯವು, 'ಇದೊಂದು ಸುಳ್ಳು ಸುದ್ದಿಯಷ್ಟೇ. ದಿಕ್ಕು ತಪ್ಪಿಸುವ ಇಂತಹ ಸುದ್ದಿಗಳನ್ನು ಜನರು ನಂಬಬಾರದು' ಎಂದು ಹೇಳಿದೆ.

ಗ್ರಾಹಕರು ವರ್ತಕರಿಗೆ ಪಾವತಿಸುವ ಮೊತ್ತದಲ್ಲಿ ನೀಡಬೇಕಿರುವ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಶುಲ್ಕವನ್ನು 2020ರ ಜನವರಿಯಿಂದ ಅನ್ವಯವಾಗುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ರದ್ದುಪಡಿಸಿದೆ. ಇದರಿಂದ ಯುಪಿಐ ಪಾವತಿಗೆ ಎಂಡಿಆರ್‌ ಶುಲ್ಕ ಇಲ್ಲ. ಹಾಗಾಗಿ, ಜಿಎಸ್‌ಟಿ ಕೂಡ ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ದೇಶದಲ್ಲಿ ಯುಪಿಐ ವಹಿವಾಟು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2019-20ರಲ್ಲಿ ₹21.3 ಲಕ್ಷ ಕೋಟಿ ವಹಿವಾಟು ನಡೆದರೆ, ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯಕ್ಕೆ ₹260.56 ಲಕ್ಷ ಕೋಟಿಗೆ ಮುಟ್ಟಿದೆ. ಯುಪಿಐ ಪಾವತಿ ವಹಿವಾಟಿಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಬದ್ಧವಾಗಿದೆ ಎಂದು ತಿಳಿಸಿದೆ.

ಸಣ್ಣ ಮೊತ್ತದ ಏಕೀಕೃತ ಪಾವತಿ ವ್ಯವಸ್ಥೆಯ ಉತ್ತೇಜನಕ್ಕೆ ಕೇಂದ್ರ ಒತ್ತು ನೀಡಿದೆ. ಇದಕ್ಕಾಗಿ 2021-22ರಿಂದ ಪ್ರೋತ್ಸಾಹ ಯೋಜನೆಯನ್ನು ಜಾರಿಗೊಳಿಸಿದೆ. ಕಡಿಮೆ ಮೊತ್ತ ಪಾವತಿಸುವವರಿಗೆ (ಗ್ರಾಹಕನಿಂದ ವರ್ತಕನಿಗೆ) ಉತ್ತೇಜನ ನೀಡುವುದು ಇದರ ಉದ್ದೇಶ. ಗ್ರಾಹಕರು ವರ್ತಕರಿಗೆ ಪಾವತಿಸುವ ಮೊತ್ತದಲ್ಲಿ ನೀಡಬೇಕಿರುವ ಎಂಡಿಆರ್‌ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಡಿಜಿಟಲ್‌ ಪಾವತಿಗೆ ಬಲವರ್ಧನೆ ನೀಡುವುದು ಇದರ ಆಶಯವಾಗಿದೆ.

ಈ ಪ್ರೋತ್ಸಾಹ ಯೋಜನೆಯಡಿ 2022-23ರಲ್ಲಿ ₹2,210 ಕೋಟಿ ಹಾಗೂ 2023-24ರಲ್ಲಿ ₹3,631 ಕೋಟಿಯನ್ನು ಸರ್ಕಾರವೇ ಭರಿಸಿದೆ. ಈ ಯೋಜನೆಯು ಸಣ್ಣ ವರ್ತಕರು ಡಿಜಿಟಲ್‌ ಪಾವತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತೇಜನ ನೀಡಲಿದೆ. ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡುವ ಸರ್ಕಾರದ ನಿರ್ಧಾರಕ್ಕೆ ಇದು ಕನ್ನಡಿ ಹಿಡಿದಿದೆ ಎಂದು ಸಚಿವಾಲಯ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries