HEALTH TIPS

Waqf Amendment Act | ವಕ್ಫ್‌ ಕಾಯ್ದೆ: ವ್ಯಾಪಕ ತಡೆಗೆ ಕೇಂದ್ರ ವಿರೋಧ

ನವದೆಹಲಿ: ಕೇಂದ್ರ ಸರ್ಕಾರವು ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಬಲವಾಗಿ ಸಮರ್ಥಿಸಿಕೊಂಡಿದೆ.

ಸಂಸತ್‌ನಲ್ಲಿ ಅಂಗೀಕರಿಸಲಾದ ಈ ಕಾಯ್ದೆಗೆ ಸಾಂವಿಧಾನಿಕ ಸಿಂಧುತ್ವ ಇರುತ್ತದೆ. ಹೀಗಾಗಿ ಕಾಯ್ದೆಗೆ ಸಂಬಂಧಿಸಿ ವ್ಯಾಪಕವಾಗಿ ಅನ್ವಯವಾಗುವಂತೆ ತಡೆ ನೀಡುವುದನ್ನು ಕೂಡ ಕೇಂದ್ರ ವಿರೋಧಿಸಿದೆ.

ಸುಪ್ರೀಂ ಕೋರ್ಟ್‌ಗೆ 1,332 ಪುಟಗಳ ಪ್ರಾಥಮಿಕ ಪ್ರಮಾಣಪತ್ರ ಸಲ್ಲಿಸಿರುವ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ , 'ವಕ್ದ್‌ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳನ್ನು ವಜಾಗೊಳಿಸಬೇಕು' ಎಂದು ಕೋರಿದೆ.

ಮುಖ್ಯನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ನ್ಯಾಯಪೀಠವು, ವಕ್ಫ್‌ ಕಾಯ್ದೆಯಲ್ಲಿನ ಕೆಲ ಅವಕಾಶಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಮೇ 5ರಂದು ನಡೆಸಲಿದೆ.

'ಈ ಮೇಲ್ಮನವಿಗಳು, ಕಾಯ್ದೆಯಲ್ಲಿನ ಕೆಲ ಅವಕಾಶಗಳ ಕುರಿತಂತೆ ದುರುದ್ದೇಶದಿಂದ ಕೂಡಿದ ಸುಳ್ಳು ಸಂಕಥನಗಳನ್ನು ಒಳಗೊಂಡಿವೆ. ಅರ್ಜಿದಾರರು ಉಲ್ಲೇಖಿಸಿರುವ ವಿಚಾರಗಳು ತಪ್ಪು ಮಾತ್ರವಲ್ಲ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ದಾರಿ ತಪ್ಪಿಸುವಂತಿವೆ. ಹೀಗಾಗಿ ಕಾಯ್ದೆಯಲ್ಲಿ ಅವಕಾಶಗಳಿಗೆ ತಡೆ ನೀಡಬಾರದು' ಎಂದೂ ಪ್ರತಿಪಾದಿಸಿದೆ.

'ಅವಕಾಶಗಳ ದುರ್ಬಳಕೆ': ವಕ್ಫ್‌ ಕಾಯ್ದೆಯಲ್ಲಿನ ಕೆಲ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡಿರುವ ಹಲವಾರು ನಿದರ್ಶನಗಳು ಇವೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ವಿವರಿಸಿದೆ.

'ಬಳಕೆಯ ಕಾರಣದಿಂದಾಗಿ ವಕ್ಫ್‌' ಹಾಗೂ 'ಯಾವುದೇ ಆಸ್ತಿಯನ್ನು ವಕ್ಫ್‌ ಎಂಬುದಾಗಿ ವಕ್ಫ್‌ ಮಂಡಳಿ ಘೋಷಿಸುವುದು' ಅವಕಾಶಗಳು ಸರ್ಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಒತ್ತುವರಿ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದವು ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಹೇಳಿದೆ.

ಕೇಂದ್ರದ ವಾದ: ಪ್ರಮುಖ ಅಂಶಗಳು

  • ಕಾಯ್ದೆಗೆ ಸಂಬಂಧಿಸಿ ಸಂಪೂರ್ಣ ಅಥವಾ ಭಾಗಶಃ ತಡೆ ನೀಡುವುದರಿಂದ ಆಗುವ ಪರಿಣಾಮಗಳ ಕುರಿತು ಅರಿವು ಇಲ್ಲದೆಯೇ ಇಂತಹ ಯಾವುದೇ ಆದೇಶ ನೀಡುವುದನ್ನು ಒಪ್ಪತಕ್ಕದ್ದಲ್ಲ. ಇಂತಹ ಆದೇಶವು ಮುಸ್ಲಿಂ ಸಮುದಾಯದ ಸದಸ್ಯರ ಮೇಲೂ ಅಡ್ಡ ಪರಿಣಾಮ ಬೀರುತ್ತದೆ

  • ಶಾಸನಾತ್ಮಕ ಅವಕಾಶಗಳಿಗೆ ಸಾಂವಿಧಾನಿಕ ಕೋರ್ಟ್‌ಗಳು ನೇರವಾಗಿ ಇಲ್ಲವೇ ಪರೋಕ್ಷವಾಗಿ ತಡೆ ನೀಡುವಂತಿಲ್ಲ ಎಂಬುದು ಸ್ಥಾಪಿತ ತತ್ವ. ಸಂಸತ್‌ನಲ್ಲಿ ಅಂಗೀಕರಿಸಿರುವ ಕಾಯ್ದೆಗಳು ಸಾಂವಿಧಾನಿಕ ಸಿಂಧುತ್ವ ಹೊಂದಿರುತ್ತವೆ ಎಂದೇ ಭಾವಿಸಲಾಗುತ್ತದೆ. ಇದನ್ನು ಬದಲಾಯಿಸುವುದಕ್ಕೆ 'ಅನುಮತಿ ನೀಡಲಾಗುವುದಿಲ್ಲ'

  • ವಕ್ಫ್‌ ಹೊಂದಿರುವ ಆಸ್ತಿಯ ಪ್ರಮಾಣದಲ್ಲಿ 2013ರಿಂದ ಶೇ 116ರಷ್ಟು ಹೆಚ್ಚಳ ಕಂಡುಬಂದಿದೆ

  • 'ಬಳಕೆಯ ಕಾರಣದಿಂದಾಗಿ ವಕ್ಫ್‌' ಆಸ್ತಿಗಳನ್ನು ಏಪ್ರಿಲ್‌ 8ರ ಹೊತ್ತಿಗೆ ನೋಂದಣಿ ಮಾಡಿಸಿರಬೇಕು ಎಂಬ ಅವಕಾಶಕ್ಕೆ ವಿರೋಧ ಸಲ್ಲ. ಯಾವುದೇ ಮಧ್ಯಂತರ ಆದೇಶದ ಮೂಲಕ ಇಂತಹ ಅವಕಾಶದಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಅದು 'ನ್ಯಾಯಾಂಗದ ಆದೇಶದ ಮೂಲಕ ಸೃಜಿಸಿದ ಆಡಳಿತ' ಎನಿಸುತ್ತದೆ

  • ಕಾಯ್ದೆಗೆ ತಂದ ತಿದ್ದುಪಡಿಯಿಂದಾಗಿ ಕೇಂದ್ರೀಯ ವಕ್ಫ್‌ ಪರಿಷತ್ತು ಮತ್ತು ರಾಜ್ಯ ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮರ ಸಂಖ್ಯೆ ಕುಸಿಯಲಿದೆ ಎಂಬ ವಾದದಲ್ಲಿ ಹುರುಳಿಲ್ಲ

  • ಅರ್ಜಿದಾರರ ನಿವೇದನೆಯಂತೆ ನೀಡುವ ಯಾವುದೇ ಆದೇಶವು ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಈ ತಿದ್ದುಪಡಿ ಕಾಯ್ದೆಗೆ ತಡೆ ನೀಡಿದಂತಾಗಲಿದೆ. ಇಂತಹ ಆದೇಶ ಹೊರಡಿಸಲು ಅವಕಾಶ ಇಲ್ಲ ಎಂಬುದನ್ನು ಸಂವಿಧಾನದಲ್ಲಿಯೇ ನಿರೂಪಿಸಲಾಗಿದೆ

  • ವಕ್ಫ್‌ ತಿದ್ದುಪಡಿ ಕಾಯ್ದೆಯು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬ ವಾದದಲ್ಲಿ ಸತ್ಯಾಂಶ ಇಲ್ಲ. ಕಾಯ್ದೆಯು ಮುಸ್ಲಿಂ ಸಮುದಾಯದ ಮುಖ್ಯ ಧಾರ್ಮಿಕ ಪದ್ಧತಿಗಳನ್ನು ಗೌರವಿಸುತ್ತದೆ. ನಂಬಿಕೆ ಮತ್ತು ಪ್ರಾರ್ಥನೆಯಂತಹ ವಿಚಾರಗಳ ಗೊಡವೆಗೇ ಹೋಗಿಲ್ಲ

  • ವಕ್ಫ್‌ ಆಸ್ತಿಗಳ ಆಡಳಿತವು ಜಾತ್ಯತೀತವಾಗಿರುವ ಕಾರ್ಯ. ವಕ್ಫ್‌ ಪರಿಷತ್ತು ಮತ್ತು ಮಂಡಳಿಗಳು ಧಾರ್ಮಿಕ ಚಟುವಟಿಕೆಗಳಿಗೆ ಹೊಣೆಯಲ್ಲ ಹೀಗಾಗಿ ಮುಸ್ಲಿಮರಲ್ಲದವರು ಮಂಡಳಿಗಳಲ್ಲಿ ಇರುವುದರಿಂದ ಸಂವಿಧಾನದ 26ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries