HEALTH TIPS

ವಿದೇಶಗಳಲ್ಲಿ ನಿರ್ಮಾಣಗೊಂಡ ಚಿತ್ರಗಳಿಗೆ ಶೇ 100ರಷ್ಟು ತೆರಿಗೆ ಘೋಷಿಸಿದ ಟ್ರಂಪ್

ವಾಷಿಂಗ್ಟನ್: ವಿದೇಶಗಳಲ್ಲಿ ನಿರ್ಮಾಣವಾಗುವ ಚಲನಚಿತ್ರಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಇತರ ದೇಶಗಳು ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸಲು ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಂದಾಗಿ ಅಮೆರಿಕದ ಚಲನಚಿತ್ರೋದ್ಯಮವು ಅತ್ಯಂತ ವೇಗವಾಗಿ ನಶಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ವಿದೇಶದಲ್ಲಿ ನಿರ್ಮಾಣವಾಗುವ ಎಲ್ಲ ಚಲನಚಿತ್ರಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ವಾಣಿಜ್ಯ ಇಲಾಖೆಯಂತಹ ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ಅಧಿಕಾರ ನೀಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ನಾವು ಅಮೆರಿಕದಲ್ಲಿ ನಿರ್ಮಾಣವಾಗುವ ಚಿತ್ರಗಳನ್ನೇ ಬಯಸುತ್ತೇವೆ ಎಂದೂ ಅವರು ಹೇಳಿದ್ದಾರೆ.

ವಿದೇಶಗಳಲ್ಲಿ ನಿರ್ಮಾಣವಾಗಿ ಅಮೆರಿಕದಲ್ಲಿ ತೆರೆ ಕಾಣುವ ಚಿತ್ರಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಿನಿಮಾಗಳ ಮೇಲಿನ ಹೊಸ ಸುಂಕ ನೀತಿಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬ ಬಗ್ಗೆ ಟ್ರಂಪ್ ಆಗಲಿ , ವಾಣಿಜ್ಯ ಇಲಾಖೆಯಾಗಲಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಸ್ಟ್ರೀಮಿಂಗ್ ಸೇವೆಗಳಲ್ಲಿನ ಚಲನಚಿತ್ರಗಳಿಗೆ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಚಲನಚಿತ್ರಗಳಿಗೆ ಸುಂಕಗಳು ಅನ್ವಯವಾಗುತ್ತವೆಯೇ? ನಿರ್ಮಾಣ ವೆಚ್ಚಗಳು ಅಥವಾ ಬಾಕ್ಸ್ ಆಫೀಸ್ ಆದಾಯದ ಆಧಾರದ ಮೇಲೆ ಅವುಗಳನ್ನು ಲೆಕ್ಕಹಾಕಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಹಾಲಿವುಡ್ ಗತವೈಭವ ಮರುಕಳಿಸಲು ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಹಾಲಿವುಡ್‌ನ ಹಿರಿಯ ನಟರಾದ ಜಾನ್ ವಾಯ್ಟ್, ಸಿಲ್ವೆಸ್ಟರ್ ಸ್ಟಲ್ಲೋನ್ ಮತ್ತು ಮೆಲ್ ಗಿಬ್ಸನ್ ಅವರಿಗೆ ಜನವರಿಯಲ್ಲಿ ಟ್ರಂಪ್ ಸೂಚಿಸಿದ್ದರು.

ಹಾಲಿವುಡ್‌ನಲ್ಲಿ ಚಲನಚಿತ್ರ ಮತ್ತು ಟಿ.ವಿ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನಿರ್ಮಾಪಕರು ತೆರಿಗೆ ಪ್ರೋತ್ಸಾಹ ಹೊಂದಿರುವ ದೇಶಗಳಿಗೆ ಚಿತ್ರೀಕರಣಕ್ಕಾಗಿ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಈ ಹೊಸ ಸುಂಕ ಜಾರಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries