ಮೊರಾದಾಬಾದ್: ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್‌ನ ಉಗ್ರ ಉಲ್ಫತ್ ಹುಸೇನ್‌ಗೆ ಇಲ್ಲಿನ ನ್ಯಾಯಾಲಯವೊಂದು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಛಾಯಾ ಶರ್ಮಾ, ಈ ತೀರ್ಪು ನೀಡಿದ್ದು, ₹48,000 ದಂಡವನ್ನೂ ವಿಧಿಸಿದ್ದಾರೆ ಎಂದು ಎಡಿಜಿಸಿ ಸುರೇಶ್ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ನಿವಾಸಿಯಾದ ಉಲ್ಫತ್ ಹುಸೇನ್ ಅಲಿಯಾಸ್ ಮೊಹಮ್ಮದ್ ಸೈಫುಲ್ ಇಸ್ಲಾಂ, 2002ರಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, 2008ರಲ್ಲಿ ಜಾಮೀನು ಪಡೆದ ನಂತರ ತಲೆಮರೆಸಿಕೊಂಡಿದ್ದ ಎಂದು ಸಿಂಗ್ ಹೇಳಿದ್ದಾರೆ.
ಮೊರಾದಾಬಾದ್ ನ್ಯಾಯಾಲಯವು 2015 ಮತ್ತು 2025ರಲ್ಲಿ ಆತನ ವಿರುದ್ಧ ಶಾಶ್ವತ ವಾರಂಟ್ ಹೊರಡಿಸಿತ್ತು. ಆತನ ಕುರಿತು ಮಾಹಿತಿ ನೀಡಿದವರಿಗೆ ₹25,000 ಬಹುಮಾನವನ್ನು ಘೋಷಿಸಲಾಗಿತ್ತು.
ಬಳಿಕ, ಈ ವರ್ಷ ಮಾರ್ಚ್ 8ರಂದು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕಟ್ಘರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಯಶಸ್ವಿಯಾಗಿ ಬಂಧಿಸಲಾಗಿತ್ತು. ನಂತರ ಮೊರಾದಾಬಾದ್ ಜೈಲಿಗೆ ವರ್ಗಾಯಿಸಲಾಗಿತ್ತು ಎಂದು ಸಿಂಗ್ ಹೇಳಿದ್ದಾರೆ.




