ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಸಾಲದ ನೆರವಿನ ಮುಂದಿನ ಕಂತನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ.
ಹೊಸ ಷರತ್ತುಗಳಲ್ಲಿ 17.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳ (ರೂಪಾಯಿ) ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಪಡೆಯುವುದು, ವಿದ್ಯುತ್ ಬಿಲ್ ಬಾಕಿ ಮೇಲೆ ಹೆಚ್ಚುವರಿ ಶುಲ್ಕ ಹೆಚ್ಚಿಸುವುದು ಮತ್ತು ಮೂರು ವರ್ಷಕ್ಕಿಂತ ಹಳೆಯದಾದ ಬಳಸಿದ ಕಾರುಗಳ ಆಮದು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಸೇರಿವೆ.
ಭಾರತದ ಜೊತೆಗಿನ ಸಂಘರ್ಷ ಮುಂದುವರಿದರೆ ಅಥವಾ ಇನ್ನಷ್ಟು ತೀವ್ರಗೊಂಡರೆ, ಆರ್ಥಿಕತೆಯು ಇನ್ನಷ್ಟು ಅಪಾಯಕ್ಕೆ ಒಳಗಾಗಬಹುದು. ಸುಧಾರಣಾ ಕ್ರಮಗಳು ಹಾದಿತಪ್ಪಬಹುದು ಎಂದು ಐಎಫ್ ಹೇಳಿರುವುದಾಗಿ 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಈಗ ವಿಧಿಸಿರುವ 11 ಹೊಸ ಷರತ್ತುಗಳು ಸೇರಿ ಒಟ್ಟು ಷರತ್ತುಗಳ ಸಂಖ್ಯೆ 50ಕ್ಕೆ ಏರಿಕೆಯಾಗಿವೆ ಎಂದು ಪತ್ರಿಕೆಯ ವರದಿ ಹೇಳಿದೆ.
ಐಎಂಎಫ್ ವರದಿಯು ಪಾಕಿಸ್ತಾನದ ಒಟ್ಟು ಬಜೆಟ್ ಗಾತ್ರವನ್ನು 17.6 ಲಕ್ಷ ಕೋಟಿ ರೂಪಾಯಿ ಎಂದು ತೋರಿಸಿದೆ. ಇದರಲ್ಲಿ ಅಭಿವೃದ್ಧಿ ವೆಚ್ಚಕ್ಕಾಗಿ 1.07 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಾಗೆಯೇ ಮುಂದಿನ ಹಣಕಾಸು ವರ್ಷದ ರಕ್ಷಣಾ ಬಜೆಟ್ ಅನ್ನು 2.414 ಲಕ್ಷ ಕೋಟಿ ರೂಪಾಯಿ ಎಂದು ತೋರಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 252 ಶತಕೋಟಿ ರೂಪಾಯಿ ಅಥವಾ ಶೇ 12ರಷ್ಟು ಹೆಚ್ಚಳವಾಗಿದೆ. ಐಎಂಎಫ್‌ನ ಅಂದಾಜಿಗೆ ಹೋಲಿಸಿದರೆ, ಈ ತಿಂಗಳ ಆರಂಭದಲ್ಲಿ ಭಾರತದೊಂದಿಗಿನ ಸಂಘರ್ಷದ ನಂತರ ಪಾಕಿಸ್ತಾನ ಸರ್ಕಾರವು 2.5 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಅಥವಾ ಶೇಕಡಾ 18ರಷ್ಟು ಹೆಚ್ಚಿನ ಬಜೆಟ್ ಅನ್ನು ರಕ್ಷಣೆಗೆ ನಿಗದಿಪಡಿಸುವ ಸೂಚನೆ ನೀಡಿದೆ.




