ಜಮ್ಮು: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಡೆದ 12 ದಿನಗಳ ಬಳಿಕ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಗೆ ಸಮೀಪವಿರುವ ಶಾಲೆಗಳು ಸೋಮವಾರ ಪುನಾರಂಭಗೊಂಡಿವೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು.
ಕಾರ್ಯಾಚರಣೆ ನಡೆದ ಮೂರು ದಿನಗಳ ನಂತರ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿತ್ತು.
ಭಾರತದ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಗಡಿ ರಾಜ್ಯಗಳಾದ ಪಂಜಾಬ್, ರಾಜಸ್ತಾನ ಮತ್ತು ಜಮ್ಮುವಿನಲ್ಲಿ ಶೆಲ್ ದಾಳಿ ನಡೆಸಿತ್ತು.
ಪೂಂಚ್, ರಜೌರಿ, ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ 12 ದಿನಗಳಿಂದ ಮುಚ್ಚಲ್ಪಟ್ಟಿರುವ ಶಾಲೆಗಳು ಇಂದು(ಸೋಮವಾರ) ಪುನರಾರಂಭಗೊಂಡಿವೆ.
ಜಮ್ಮುವಿನಲ್ಲಿ ಮೇ 15ರಂದೇ ಹೆಚ್ಚಿನ ಶಾಲೆಗಳು ಪುನಾರಂಭಗೊಂಡಿದ್ದರೂ ಗಡಿ ನಿಯಂತ್ರಣ ರೇಖೆಗೆ ಸಮೀಪವಿರುವ ಶಾಲೆಗಳನ್ನು ಮಕ್ಕಳ ಸುರಕ್ಷತಾ ದೃಷ್ಠಿಯಿಂದ ತೆರೆದಿರಲಿಲ್ಲ. ಸೋಮವಾರ ಈ ಶಾಲೆಗಳು ಮಕ್ಕಳಿಗೆ ಮುಕ್ತವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ವಲಯ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.




