ಕೋಲ್ಕತ್ತ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕಾರ್ಯಪಡೆಯಲ್ಲಿ ಸುಮಾರು ಶೇ 20ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ ಮತ್ತು ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
ಗುರುವಾರ ಖಾಸಗಿ ಶಾಲೆಯೊಂದರಲ್ಲಿ ಆಯೋಜಿಸಿದ್ದ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ.
ಅವರು ಗಣನೀಯ ಕೊಡುಗೆ ನೀಡದ ಹೊರತು ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇಸ್ರೊದಲ್ಲಿ ಮಹಿಳಾ ಕಾರ್ಯಪಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇಲ್ಲಿ ಬಹಳಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೊಡುಗೆಯನ್ನು ಪ್ರೋತ್ಸಾಹಿಸಬೇಕು. ಕ್ರಮೇಣ ಅವರ ಸಂಖ್ಯೆ ಹೆಚ್ಚಾಗಬೇಕು. ನಮ್ಮಲ್ಲಿ ಬಹುಶಃ ಈಗ ಶೇ 20ರಷ್ಟು ಮಹಿಳಾ ವಿಜ್ಞಾನಿಗಳು ಇರಬಹುದು. ಭವಿಷ್ಯದಲ್ಲಿ ಅವರ ಸಂಖ್ಯೆ ಶೇ 40ಕ್ಕಿಂತ ಹೆಚ್ಚಾಗಬೇಕು ಎಂದು ಅವರು ಹೇಳಿದ್ದಾರೆ.




